ರಾಯಚೂರು ಮಹಾನಗರ ಪಾಲಿಕೆಯಿಂದ ʼಕಂದಾಯ ಅದಾಲತ್ʼ

ರಾಯಚೂರು : ಮಹಾನಗರ ಪಾಲಿಕೆಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ನ.14ರಂದು ಕಂದಾಯ ಅದಾಲತ್ ನಡೆಯಿತು.
"ನಿಮ್ಮ ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ ಯೋಜನೆ" ಅಭಿಯಾನದಡಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಅವರು ಮಾತನಾಡಿ, ಸರ್ಕಾರದಿಂದ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದ್ದು, ನಗರದ ನಾಗರಿಕರು ಈ ಸೌಲಭ್ಯ ಪಡೆಕೊಳ್ಳಬೇಕು. ಪ್ರತಿಯೊಂದು ಆಸ್ತಿಗೂ ಇ–ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಸರ್ಕಾರಿ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿಯ ಆಸ್ತಿಗಳಿಗೂ ಇ–ಖಾತಾ ಕಡ್ಡಾಯ. ಕಟ್ಟಡ ಹಾಗೂ ನಿವೇಶನಗಳ ಮಾಲಕರು, ಆಸ್ತಿಗಳಿಗೆ ಸಂಬಂಧಪಟ್ಟಂತೆ ನೊಂದಾಯಿತ ಪತ್ರಗಳು, ಆಸ್ತಿಯ ಛಾಯಾಚಿತ್ರ, ಮಾಲಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಪಾನ್ ಕಾರ್ಡ್, ರೇಷನ್ ಕಾರ್ಡ್, ವಿದ್ಯುತ್ ಬಿಲ್, ಕಟ್ಟಡ ಪರವಾನಗಿ ಪತ್ರ, ಅನುಮೋದಿತ ನಕ್ಷೆ, ಬಿನಶೆತ್ಕಿ ನಕಲು ಪ್ರತಿ, ಏಕ ನಿವೇಶನ, ಬಹುನಿವೇಶನಗಳ ತಾಂತ್ರಿಕ ಅನುಮೋದನೆ ನಕ್ಷೆ, ಸಿಟಿಎಸ್ ಉತಾರ, ಕಂದಾಯ ಪಾವತಿಸಿದ ರಶೀದಿ ಹಾಗೂ ಇತರೆ ಅವಶ್ಯಕ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಹೇಳಿದರು.
ಈ ವೇಳೆ ಪಾಲಿಕೆಯ ಸದಸ್ಯ ಶಿಶಿಧರ್ ಮಾತನಾಡಿ, ಅಭಿಯಾನದಲ್ಲಿ ಸಾಕಷ್ಟು ಅರ್ಜಿಗಳು ಸ್ವೀಕರಿಸಲಾಗುತ್ತಿದ್ದು, ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು, ಉಪ ಅಯುಕ್ತರು ಸೇರಿದಂತೆ ಅಧಿಕಾರಿ ಸಿಬ್ಬಂದಿಯು ಅಭಿಯಾನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಜೋನಲ್ -01 ಆಯುಕ್ತರಾದ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಭಾಗದ ಅಧಿಕಾರಿ, ಸಿಬ್ಬಂದಿ ಇದ್ದರು.





