ಅಟಲ್ ಭೂಜಲ ಯೋಜನೆಯಡಿ ರಾಜ್ಯಕ್ಕೆ 140 ಕೋಟಿ ರೂ. ಅನುದಾತ ಕಡಿತ; ಕೇಂದ್ರದ ರಾಜ್ಯ ಖಾತೆ ಸಚಿವರು ರಾಜೀನಾಮೆ ನೀಡಲಿ ಎಂದ ಸಚಿವ ಬೋಸರಾಜು

ರಾಯಚೂರು: ಅಂತರ್‌ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದಿಂದ ಇಡೀ ದೇಶದಲ್ಲಿ 7 ರಾಜ್ಯಗಳಲ್ಲಿ ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದ್ದು, ಆದರೆ ಕರ್ನಾಟಕಕ್ಕೆ ಯೋಜನೆಯಡಿ ನೀಡಬೇಕಾದ 140 ಕೋಟಿ ರೂ. ಕಡಿತಗೊಳಿಸಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದ್ದು, ರಾಜಕೀಯ ಮಾತುಗಳನ್ನಾಡುವ ಕೇಂದ್ರದ ರಾಜ್ಯ ಖಾತೆ ಸಚಿವರು ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಅವರಿಂದು ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದ 14 ಪ್ರದೇಶಗಳ 44 ತಾಲೂಕುಗಳ 1199 ಗ್ರಾಮ ಪಂಚಾಯತ್ ಗಳಲ್ಲಿ ಅಂತರ್‌ಜಲ ಮಟ್ಟ ಕಡಿಮೆಯಿದ್ದು, ದೇಶದಲ್ಲಿ 5ನೇ ಸ್ಥಾನದಲ್ಲಿ ಕರ್ನಾಟಕ ಇದ್ದು, ಅಂತರ್‌ಜಲ ಮಟ್ಟವನ್ನು ಅಭಿವೃದ್ಧಿಪಡಿಸಲು ಅಟಲ್ ಭೂಜಲ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ರಾಜ್ಯಕ್ಕೆ 1000 ಕೋಟಿ ನೀಡುತ್ತದೆ. ಆದರೆ ಕರ್ನಾಟಕ ರಾಜ್ಯಕ್ಕೆ 860 ಕೋಟಿ ರೂ.ಗಳನ್ನು ನೀಡಿ, 140 ಕೋಟಿ ರೂ.ಗಳನ್ನು ಕಡಿತ ಮಾಡಿದ್ದಾರೆ.
ಆಲಮಟ್ಟಿ ಜಲಾಶಯವನ್ನು 524 ಮೀಟರ್ ಎತ್ತರಗೊಳಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಹಾರಾಷ್ಟ್ರ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ಪರಿಹಾರ ದರ ನಿಗಧಿಗೊಳಿಸಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಜೊತೆಗೆ ಆಲಮಟ್ಟಿ ಜಲಾಶಯವನ್ನು 524 ಮೀಟರ್ ಗೆ ಏರಿಸಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಯೋಜನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸದೇ ರಾಜಕೀಯ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದಿಂದ ಆಕ್ಷೇಪಣೆಯನ್ನು ಸಲ್ಲಿಸಲಾಗಿದ್ದು, ಇದರಿಂದಲೇ ತಿಳಿಯುತ್ತದೆ ಕೇಂದ್ರ ಸರ್ಕಾರಕ್ಕೆ ಬದ್ದತೆಯಿಲ್ಲ. ಅವರಿಗೆ ರಾಜಕೀಯ ಪರಿಪಾಠ ಬಿಟ್ಟು ಬೇರೇನು ಗೊತ್ತಿಲ್ಲ ಎಂದ ಅವರು ಕೂಡಲೇ ಕೇಂದ್ರ ಸಕಾರಕ್ಕೆ ಬದ್ದತೆಯಿದ್ದರೆ 24 ಗಂಟೆಗಳ ಒಳಗಾಗಿ ನೋಟಿಫಿಕೇಷನ್ ಹೊರಡಿಸಬೇಕು ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯ ಸರಿಪಡಿಸಲು ವಿಫಲವಾಗಿದೆ ಕೇಂದ್ರ ರಾಜ್ಯ ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ್ ಜೋಷಿ, ಹಾಗೂ ಶೋಭಾ ಕರಂದ್ಲಾಜೆ ಕೇಂದ್ರದ ಮಲತಾಯಿ ಧೋರಣೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಜ್ಯದ ರೈತರ ಸಮಸ್ಯೆಗಳಿಗೆ, ಜನರ ಸಮಸ್ಯೆಗಳ ಹಾಗೂ ಅಭಿವೃದ್ಧಿ ಕುರಿತು ಮಾತನಾಡದ ಇವರು ಕೇವಲ ರಾಜಕೀಯವಾಗಿ ಮಾತ್ರ ಮಾತನಾಡುತ್ತಾರೆ. ಕೂಡಲೇ ಈ ನಾಲ್ಕು ಜನರು ರಾಜಿನಾಮೆ ಸಲ್ಲಿಸಿ, ಬೀದಿಗಿಳಿದು ಹೋರಾಟ ಮಾಡಬೇಕು ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 2024-25ನೇ ಸಾಲಿಗೆ 2500 ಕೋಟಿ ರೂ, ಅನುದಾನ ಮೀಸಲಿಡಲಾಗಿತ್ತು. ಪ್ರಸ್ತುತ 3100 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಜನಾಭಿಪ್ರಾಯದ ಅನುಗುಣವಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಮಾಡಲು ರಾಜ್ಯ ಸರ್ಕಾರದಿಂದ ತೀರ್ಮಾನಿಸಿದ್ದು, ಸೆ.22ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದ್ದು, ಪರ ವಿರೊದ ಚರ್ಚೆಗಳಾಗಿವೆ. ಆದರೆ ಮುಂದೂಡಿಕೆಯ ಯಾವ ಪ್ರಶ್ನೆಯೂ ಇಲ್ಲ. ಸಮೀಕ್ಷೆ ನಡೆದೇ ನಡೆಯುತ್ತದೆ ಎಂದರು.
ಈ ಸಂದರ್ಭಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಶ್ರೀನಿವಾಸರೆಡ್ಡಿ, ಜಿಂದಪ್ಪ, ಅಮರೇಗೌಡ ಹಂಚಿನಾಳ, ಯೂಸೂಫ್‌ಖಾನ್, ವಿ.ಲಕ್ಷ್ಮೀರೆಡ್ಡಿ, ಜಯಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಬಿ.ರಮೇಶ, ಆಂಜನೇಯ್ಯ, ಶ್ಯಾಮಸುಂದರ್ ಮೇಸ್ತ್ರಿ, ವಿಶ್ವನಾಥ ಪಟ್ಟಿ ಸೇರಿದಂತೆ ಅನೇಕರಿದ್ದರು







