ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅಧಿಕಾರ ಸ್ವೀಕಾರ

ರಾಯಚೂರು: ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಧಿಕಾರ ವಹಿಸಿಕೊಂಡರು.
ಎನ್ಎಸ್ಯುಐ ಮೂಲಕ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ರುದ್ರಪ್ಪ ಅಂಗಡಿ ಅವರು ಕಳೆದ ಸುಮಾರು 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಕೈತಪ್ಪಿದ್ದ ಅಧ್ಯಕ್ಷ ಸ್ಥಾನ ಇದೀಗ ಅವರಿಗೆ ಒಲಿದುಬಂದಿದೆ.
ನೂತನ ಅಧ್ಯಕ್ಷರೊಂದಿಗೆ ಗಾಯತ್ರಿ ಜಿಂದಪ್ಪ, ಕೆ. ರಾಮು, ಬಿ. ಗೋವಿಂದಪ್ಪ ನಾಯಕ ಹಾಗೂ ಮಿರ್ಜಾ ಮೊಹಮ್ಮದ್ ಫಸಿಲುಲ್ಲಾ ಅವರು ಪ್ರಾಧಿಕಾರದ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ರುದ್ರಪ್ಪ ಅಂಗಡಿ, ಸಾಮಾನ್ಯ ಪಕ್ಷದ ಕಾರ್ಯಕರ್ತನನ್ನು ಗುರುತಿಸಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದ ಪಕ್ಷದ ಹಿರಿಯ ನಾಯಕರಿಗೆ ಧನ್ಯವಾದ ಸಲ್ಲಿಸಿದರು.
ರಾಯಚೂರು ನಗರದ ಬಹುನಿರೀಕ್ಷಿತ ರಿಂಗ್ ರೋಡ್ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಜಿಲ್ಲೆಯ ಹಿರಿಯ ನಾಯಕರೊಂದಿಗೆ ಸೇರಿ ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಅವರು ತಿಳಿಸಿದರು.




