ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲನ್ನು ರಾಯಚೂರು ಮಾರ್ಗವಾಗಿ ಓಡಿಸಲಿ: ಡಾ.ಬಾಬುರಾವ್

ರಾಯಚೂರು : ಮುಂಬೈ ಮತ್ತು ಬೆಂಗಳೂರಿನ ನಡುವೆ ಸೂಪರ್ ಫಾಸ್ಟ್ ರೈಲು ಓಡಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಸಂಸದ ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಡಾ.ಬಾಬುರಾವ್ ಅವರು ಹೇಳಿರುವಂತೆ, ಕಳೆದ ಮೂರು ದಶಕಗಳಿಂದ ಬೆಂಗಳೂರು ಮತ್ತು ಮುಂಬೈ ನಡುವಿನ ಏಕೈಕ ಉದ್ಯಾನ್ ಎಕ್ಸ್‌ಪ್ರೆಸ್ ರೈಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈ ಕಾರಣದಿಂದ ಹೆಚ್ಚಿನ ಪ್ರಯಾಣಿಕರು ಬಸ್ ಅಥವಾ ವಿಮಾನಗಳಿಗೆ ಮೊರೆ ಹೋಗಬೇಕಾಗುತ್ತಿತ್ತು. ರೈಲ್ವೇತರ ಪ್ರಯಾಣ ದುಬಾರಿಯಾಗಿರುವುದರಿಂದ ಜನರಿಂದ ಹೊಸ ರೈಲುಗಳ ಬೇಡಿಕೆ ನಿರಂತರವಾಗಿತ್ತು. ತಮ್ಮ ರೈಲ್ವೆ ಸಲಹಾ ಸಮಿತಿ ಅವಧಿಯಲ್ಲಿ ಈ ಕುರಿತಂತೆ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾಗಿ ಅವರು ಸ್ಮರಿಸಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ಕೂಡ ಈ ವಿಷಯದಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಹೊಸ ಸೂಪರ್ ಫಾಸ್ಟ್ ರೈಲು ಯಾವ ಮಾರ್ಗವಾಗಿ ಸಂಚರಿಸುತ್ತದೆ ಎಂಬುದೇ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಹುಬ್ಬಳ್ಳಿ ಮಾರ್ಗವಾಗಿ ಈಗಾಗಲೇ ಅನೇಕ ರೈಲುಗಳು ಸಂಚರಿಸುತ್ತಿರುವುದರಿಂದ, ಹೊಸ ರೈಲನ್ನು ಕಲ್ಯಾಣ ಕರ್ನಾಟಕದ ರಾಯಚೂರು–ಯಾದಗಿರಿ–ಕಲಬುರಗಿ ಮಾರ್ಗವಾಗಿ ಓಡಿಸುವುದು ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ಜನಸಂದಣಿ ಹಾಗೂ ಆದಾಯ ಎರಡೂ ಹೆಚ್ಚಾಗಿದ್ದು, ಪ್ರಯಾಣಿಕರ ಹಿತದೃಷ್ಟಿಯಿಂದ ರೈಲ್ವೆ ಸಚಿವರು ಇದನ್ನು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದವರೇ ಆದ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ, ರಾಯಚೂರು ಮಾರ್ಗವಾಗಿ ಈ ಸೂಪರ್ ಫಾಸ್ಟ್ ರೈಲು ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಡಾ. ಬಾಬುರಾವ್ ಹೇಳಿದ್ದಾರೆ.







