ಮರಳು ಗಣಿಗಾರಿಕೆ| ಅಮಾಯಕರ ಮೇಲೆ ಪ್ರಕರಣ ದಾಖಲು: ಚಂದಪ್ಪ ಅಕ್ಕರಕಿ ಆರೋಪ

ದೇವದುರ್ಗ: ದೇವದುರ್ಗದಲ್ಲಿ ಟ್ರ್ಯಾಕ್ಟರ್ ಮೂಲಕ ಮರಳು ತೆಗೆದುಕೊಂಡು ಹೋಗುವ ಅಮಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಕೂಲಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಚಂದಪ್ಪ ಅಕ್ಕರಕಿ, ತಾಲೂಕಿನಾದ್ಯಂತ ಮಟ್ಕಾ ಹಾವಳಿ ತೀವ್ರಗೊಂಡಿದ್ದು, ಬಡಜನತೆ ಬೀದಿ ಪಾಲಾಗುತ್ತಿದ್ದಾರೆ. ಗಾಂಜಾ ಮಾರಾಟ ಜಾಲ ಸಕ್ರಿಯವಾಗಿದೆ. ಅಹಿತಕರ ಚಟುವಟಿಕೆಗಳಿಗೆ ನಿಯಂತ್ರಣವೇ ಆಗುತ್ತಿಲ್ಲ. ಮನೆ ನಿರ್ಮಿಸಿಕೊಳ್ಳುವವರ ಒತ್ತಾಯದ ಬೇಡಿಕೆ ಆಧರಿಸಿ ಕೆಲ ಟ್ರ್ಯಾಕ್ಟರ್ ಮಾಲಕರು ಮರಳು ಪಡೆಯುವುದು ಸಾಮಾನ್ಯ. ಇಲ್ಲಿ ಯಾವುದೇ ಜೆಸಿಬಿ, ಇಟಾಚಿ ಯಂತ್ರಗಳನ್ನು ಬಳಸದೇ ಕೃಷಿ ಕೂಲಿಕಾರರಿಗೆ ಕೆಲಸ ನೀಡಿ ಕೂಲಿ ನೀಡುವ ಪರಿಪಾಠವಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಮಳೆ ಬಂದಿರುವ ಪರಿಣಾಮ ಕೃಷಿಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಮರಳು ಸಾಗಾಣಿಕೆಯೇ ಅಕ್ರಮ ಎನ್ನುವುದಾದರೆ ಮನೆ ನಿರ್ಮಿಸಿಕೊಳ್ಳುವವರಿಗೆ ಅವಶ್ಯಕವಾದ ಮರಳು ನೀಡುವುದು ಹೇಗೆ? ಸರಕಾರಿ ಕಟ್ಟಡ ಕಾಮಗಾರಿಗಳಿಗೆ ಮರಳು ಬೇಕಿಲ್ಲವೇ? ಕೂಡಲೇ ತಾಲೂಕು ಮತ್ತು ಜಿಲ್ಲಾಡಳಿತ ಸಾಮಾನ್ಯರಿಗೆ ಬೇಕಾಗಿರುವ ಮರಳು ದೊರಕುವ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಶಾಸಕರ ಮನೆಗೆ ಹೋಗಿರುವ ಅಮಾಯಕರ ಮೇಲೆ ಹಾಕಲಾದ ಪ್ರಕರಣವನ್ನು ಕೈಬಿಡಬೇಕೆಂದು ಚಂದಪ್ಪ ಅಕ್ಕರಕಿ ಆಗ್ರಹಿಸಿದ್ದಾರೆ.





