ರಾಯಚೂರು | SDPI ರಾಜ್ಯ ಪ್ರತಿನಿಧಿ ಸಭೆ : ಎಸ್ಐ ಆರ್ ನಿಂದಾಗಿ ಮತದಾನದ ಹಕ್ಕಿನಿಂದ ವಂಚಿತರಾಗಬಾರದು: ಅಬ್ದುಲ್ ಮಜೀದ್

ರಾಯಚೂರು: ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನಾವು ಇನ್ನಷ್ಟು ಪ್ರಬಲ ಹೋರಾಟಗಳನ್ನು ಮಾಡಬೇಕಾಗಿದೆ. ಮತದಾರರ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯಲ್ಲಿ ಯಾವೊಬ್ಬ ಅರ್ಹ ಮತದಾರನ ಹೆಸರು ಡಿಲೀಟ್ ಆಗಬಾರದು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ನಿಗಾವಹಿಸಬೇಕಾಗಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕರೆ ನೀಡಿದರು.
ನಗರದ ಗ್ರೀನ್ ಪ್ಯಾಲೇಸ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ಪಕ್ಷದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅಬ್ದುಲ್ ಮಜೀದ್, ನವೆಂಬರ್ 2025 ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಆಯ್ಕೆಯಾದ ರಾಜ್ಯ ಕಾರ್ಯಕಾರಣಿ ಸಮಿತಿ ಕಳೆದ ಒಂದೂವರೆ ವರ್ಷದಿಂದ ಅನೇಕ ಏಳುಬೀಳುಗಳನ್ನು ಕಂಡಿದೆ. ಸುಳ್ಳು ಪ್ರಕರಣವೊಂದರಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಜೈಲಿಗೆ ಹಾಕಲಾಯಿತು. ತನಿಖಾ ಏಜೆನ್ಸಿಗಳು ಅನಗತ್ಯವಾಗಿ ತೊಂದರೆ ನೀಡಿದರು. ಇಷ್ಟೆಲ್ಲಾ ಅಡೆತಡೆಗಳು ಇದ್ದರೂ ಸಹ ಜನಪರ ಹೋರಾಟಗಳು ಮುಂದುವರಿಸಿದ್ದೇವೆ. ಇತ್ತೀಚೆಗೆ ನಡೆದ ವಿವಿಧ ಸ್ಥಳೀಯ ಚುನಾವಣೆಯಲ್ಲಿ ಮತ್ತು ದಾವಣಗೆರೆಯ ಉಪ ಚುನಾವಣೆಯ ಅಭೂತಪೂರ್ವ ಫಲಿತಾಂಶ ಸಿಕ್ಕಿರುವುದು ನಮ್ಮ ಹೋರಾಟಕ್ಕೆ ಜನ ನೀಡಿರುವ ಬೆಂಬಲ ಆಗಿದೆ. ಮುಂದೆ ಬರಲಿರುವ ಸ್ಥಳೀಯ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಲು ಈಗಲೇ ನಮ್ಮ ಕಾರ್ಯಕರ್ತರು ಮತ್ತು ನಾಯಕರು ಮಾನಸಿಕವಾಗಿ ತಯಾರಾಗಬೇಕಾಗಿದೆ. ಯುವಕರಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಯಂಗ್ ಡೆಮಾಕ್ರೆಟ್ಸ್ ಎಂಬ ಯುವಪಡೆಯನ್ನು ತಯಾರಿಸಲಿದ್ದೇವೆ ಎಂದು ಹೇಳಿದರು.
ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಎಸ್.ಡಿ.ಪಿ.ಐ ಪಕ್ಷ ಸುಭದ್ರವಾಗಿದಲ್ಲದೇ, ಪರಿಣಾಮಕಾರಿಯಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ದಾವಣಗೆರೆಯ ಉಪ ಚುನಾವಣೆಯ ಫಲಿತಾಂಶವೇ ಸಾಕ್ಷಿ. ವಿವಿಧ ರೀತಿಯ ಅಡೆತಡೆಗಳನ್ನು ಮೀರಿ ಈ ನಮ್ಮ ಸಂಘರ್ಷವನ್ನು ಮುಂದುವರಿಸುತ್ತಿದ್ದೇವೆ. ಈ ಸಂಘರ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು. ನಮ್ಮ ಕಾರ್ಯಕರ್ತರ ಬದ್ದತೆ, ತ್ಯಾಗ ನಮ್ಮ ನಾಯಕರಿಗೆ ಪ್ರೋತ್ಸಾಹ ನೀಡುತ್ತಿದೆ. ಸೈದ್ಧಾಂತಿಕ ಆಧಾರದ ಮೇಲೆ ನಮ್ಮ ಪಕ್ಷ ನಿಂತಿದೆ. ಆದುದರಿಂದ ನಮ್ಮ ಪಕ್ಷವನ್ನು ಯಾವ ಪಕ್ಷದ ಜೊತೆ ಹೋಲಿಕೆ ನೋಡಬಾರದು. ಏಕೆಂದರೆ ಪಾರಂಪರಿಕವಾಗಲೀ ಅಥವಾ ಕೌಟುಂಬಿಕವಾಗಿ ನಾವು ನಮ್ಮ ಪಕ್ಷವನ್ನು ಬೆಳೆಸಿ ಕೊಂಡು ಬಂದಿಲ್ಲ. ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷೆ ಪ್ರೊಫೆಸರ್ ಸಾದೀಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹೀದ್ ಪಾಷ, ಅಫ್ಸರ್ ಕೊಡ್ಲಿಪೇಟೆ, ಮಜೀದ್ ತುಂಬೆ, ರಾಜ್ಯ ಕಾರ್ಯದರ್ಶಿಗಳಾದ ಅಂಗಡಿ ಚಂದ್ರು, ರಮ್ಜಾನ್ ಕಡಿವಾಳ್, ರಾಜ್ಯ ಸಮಿತಿ ಸದಸ್ಯರು ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






