ರಾಯಚೂರು | ಪಾಪಯ್ಯ ಸುರಂಗ ಕಾಲುವೆ ದುರಸ್ತಿಗೊಳಿಸುವಂತೆ ಶಂಕರಗೌಡ ಹರವಿ ಆಗ್ರಹ

ರಾಯಚೂರು: ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರಿಗಿರುವ ನೀರಿನ ಕೊರತೆಯನ್ನು ನೀಗಿಸಲು ಪಾಪಯ್ಯ ಸುರಂಗ ಕಾಲುವೆಯ ಅಗಲ ಹೆಚ್ಚಳ ಮಾಡಲು ಸರಕಾರ ಮುಂದಾಗಬೇಕು ಎಂದು ತುಂಗಭದ್ರ ಎಡದಂಡೆ ಕಾಲುವೆ ರೈತರ ವೇದಿಕೆಯ ಸಂಚಾಲಕ ಶಂಕರಗೌಡ ಹರವಿ ಹೇಳಿದರು.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಶಂಕರಗೌಡ ಹರವಿ, ತುಂಗಭದ್ರ ಯೋಜನೆಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಂಟಿ ಯೋಜನೆಯಾಗಿದೆ. ಈ ಮೂರು ರಾಜ್ಯಗಳ 16 ಲಕ್ಷ ಎಕರೆ ಭೂಮಿಗೆ ನೀರಾವರಿ ಹಾಗೂ ಕಾಲುವೆ ವ್ಯಾಪ್ತಿಯ ಸಾವಿರಾರು ಹಳ್ಳಿಗಳು, ಪಟ್ಟಣಗಳಿಗೆ ಕುಡಿಯುವ ನೀರನ್ನು ಇದೇ ಯೋಜನೆಯ ಮೂಲಕ ಒದಗಿಸಲಾಗುತ್ತದೆ. ಆದರೆ ಈ ಯೋಜನೆಯ ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ನೀರು ಸಿಗದೇ ಇರುವುದು ಬಹುದೊಡ್ಡ ವೈಫಲ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ರಾಯಚೂರು, ಸಿರವಾರ ಭಾಗದ ರೈತರಿಗೆ ಈ ಯೋಜನೆಯ ಮೂಲಕ ನೀಡಲಾಗುವ ನೀರು ತಲುಪದೇ ಈ ಭಾಗದ ರೈತರು ಮೊದಲಿನಿಂದಲೂ ತೊಂದರೆ ಅನುಭವಿಸುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸಲು ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ವೇಳೆ ಶರಣಪ್ಪಗೌಡ ಜಾಡಲದಿನ್ನಿ, ನಾಗನಗೌಡ ಹರವಿ, ಬಸನಗೌಡ ಬಲ್ಲಟಗಿ, ಮಹಾಂತೇಶ್ ಪಾಟೀಲ್ ಅತ್ತನೂರು, ಚನ್ನಬಸವ, ಅಮರೇಶ ಹೊಸಮನಿ, ನಾಗರಾಜ, ಆರ್.ಎಸ್ ಪಾಟೀಲ್ ಉಪಸ್ಥಿತರಿದ್ದರು.





