ಮೋದಿ ಸರಕಾರವನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿ ಪಟ್ಟ : ಶಿವಸುಂದರ್
ಸಿಂಧನೂರಿನಲ್ಲಿ 11ನೇ ಮೇ ಸಾಹಿತ್ಯ ಮೇಳ, ‘ಐಕ್ಯ ಚಳವಳಿ; ಯಾತಕ್ಕಾಗಿ, ಯಾರ ಜೊತೆ’ ಗೋಷ್ಠಿ

ಸಿಂಧನೂರು (ರಾಯಚೂರು), : ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದ್ದು, ಮೋದಿ ಸರಕಾರವನ್ನು ಪ್ರಶ್ನಿಸಿದವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ. ವಿರೋಧ ಪಕ್ಷದ ನಾಯಕರಿಗೆ ಪ್ರಶ್ನಿಸುವ ಧೈರ್ಯವಿಲ್ಲ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಸಿಂಧನೂರು ನಗರದ ಸತ್ಯಗಾರ್ಡನ್‌ನಲ್ಲಿ ಹಮ್ಮಿಕೊಂಡಿರುವ 11ನೇ ಮೇ ಸಾಹಿತ್ಯ ಮೇಳದ ಎರಡನೇ ದಿನವಾದ ರವಿವಾರ ನಡೆದ ‘ಐಕ್ಯ ಚಳವಳಿ; ಯಾತಕ್ಕಾಗಿ, ಯಾರ ಜೊತೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೋದಿಯನ್ನು ಚುನಾವಣೆಯಲ್ಲಿ ಸೋಲಿಸಲು ಅಸಾಧ್ಯ ಎಂಬ ಭಾವನೆ ಹಲವರಲ್ಲಿದೆ. ಆದರೆ ಎಲ್ಲರನ್ನೂ ಒಳಗೊಂಡ ಐಕ್ಯ ಹೋರಾಟದಿಂದ ಅವರನ್ನು ಸೋಲಿಸಬಹುದು ಎಂದು ಅವರು ಹೇಳಿದರು.
ಇಂದಿರಾಗಾಂಧಿಯ ಸಂದರ್ಭದ ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದವರು ವೀರರೆನಿಸಿಕೊಂಡರು. ಈಗ ಸರಕಾರದ ವಿರುದ್ಧ ಹೋರಾಡುವವರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವುದು ದುರಂತ. ಜರ್ಮನಿಯ ಹಿಟ್ಲರ್ ಫ್ಯಾಸಿಸಂ ಮಾದರಿಯಲ್ಲಿ ಭಾರತದ ಪ್ರಭುತ್ವ ಫ್ಯಾಸಿಸ್ಟ್ ನೀತಿ ಅನುಸರಿಸುತ್ತಿದ್ದು, ಇದನ್ನು ವಿರೋಧ ಪಕ್ಷಗಳಿಗೂ ಹಿಮ್ಮೆಟ್ಟಿಸಲು ಆಗುತ್ತಿಲ್ಲ. ಆಡಳಿತ ಪಕ್ಷ ಆರೆಸ್ಸೆಸ್ ಸಂಚಿಗೆ ಒಳಗಾಗಿದೆ ಎಂದು ಅವರು ಹೇಳಿದರು.
ಪುಲ್ವಾಮ ದಾಳಿಯ ಸಂದರ್ಭದಲ್ಲಿ ಸರಕಾರವನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸದ ಫಲವಾಗಿ ಪಹಲ್ಗಾಮ್ ದಾಳಿ ನಡೆಯಿತು. ಆದರೆ ಈಗಲೂ ಆಡಳಿತ ವೈಫಲ್ಯದ ಬಗ್ಗೆ ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು ಸುಮ್ಮನಿರುವುದು ದುರಂತ ಎಂದರು.
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ದೇಶದಲ್ಲಿ ಅಸಮಾನತೆ ನಿವಾರಣೆ ಮಾಡಬೇಕಾದರೆ ಕಾರ್ಪೊರೇಟ್ ಮನೋಭಾವನೆಯ ಜನಪ್ರತಿನಿಧಿಗಳು ಸದನಗಳಲ್ಲಿ, ಸಂಸತ್‌ನಲ್ಲಿ ಇರಬಾರದು. ಭೂ ಸಂತ್ರಸ್ಥರು, ಸಾಮಾನ್ಯರು ಅಲ್ಲಿರಬೇಕು. ಬಿಜೆಪಿ, ಆರೆಸ್ಸೆಸ್‌ನವರು ದೇಶದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದರು.
ಸಿಪಿಐಎಂ ಕಲಬುರಗಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಭಿನ್ನವಾಗಿಲ್ಲ. ಅನೇಕರು ಮುಖವಾಡ ಧರಿಸಿದ್ದಾರೆ. ಚುನಾವಣೆ ವ್ಯವಸ್ಥೆಯಿಂದ ಫ್ಯಾಸಿಸಂನ್ನು ಸೋಲಿಸಲು ಸಾಧ್ಯವಿಲ್ಲ. ಕೋಮುವಾದ ಮತ್ತು ಮೂಲಭೂತವಾದ ಎರಡೂ ಜನಸಾಮಾನ್ಯರ ಹಿತಕ್ಕೆ ಮಾರಕವಾಗಿವೆ. ಕಾರ್ಮಿಕ, ಶೋಷಿತ ವರ್ಗ ಜಾಗೃತವಾಗಬೇಕು ಎಂದರು.
ರೈತ ಮುಖಂಡ ಚಾಮರಸ ಮಾಲಿ ಪಾಟೀಲ್, ಎಐಸಿಸಿಟಿಯು ರಾಜ್ಯ ಸಂಚಾಲಕ ಕ್ಲಿಪ್ಟನ್ ಡಿ.ರೊಝಾರಿಯೋ ಮಾತನಾಡಿದರು.
ನಾಗೇಗೌಡ ಕಿಲಾರ, ಪೀರ್ ಬಾಷಾ, ಅಮೀನ್ ಪಾಷಾ ದಿದ್ದಿಗಿ, ನಾಗರೆಡ್ಡಿ ದೇವರಮನಿ, ಬಸವಲಿಂಗಪ್ಪನಗನೂರು, ತಾಯಪ್ಪ, ಬಿ.ಕೆ.ಪೂಜಾರ್ ಉಪಸ್ಥಿತರಿದ್ದರು. ಕೆ.ಪಿ.ಸುರೇಶ್ ಗೋಷ್ಠಿ ನಿರೂಪಿಸಿದರು.