ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ಹಿಂದುಳಿದ ಜನಾಂಗಕ್ಕೆ ಅನ್ಯಾಯ: ಕುಪ್ಪಣ್ಣ ಕೊಡ್ಲಿ

ಲಿಂಗಸಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿರುವುದು ಇಡೀ ಹಿಂದುಳಿದ ವರ್ಗಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಕುಪ್ಪಣ್ಣ ಕೊಡ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಪ್ಪಣ್ಣ ಕೊಡ್ಲಿ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಸತತವಾಗಿ ಪಕ್ಷ ಸಂಘಟನೆ ಮತ್ತು ಅಧಿಕಾರವಧಿಯಲ್ಲಿ ಉತ್ತಮ ಆಡಳಿತವನ್ನು ನೀಡುತ್ತಾ ಬಂದಿದ್ದಾರೆ. ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳಿಗೆ ನ್ಯಾಯಯುತವಾದ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಥಿರವಾಗಿ ಮತ್ತು ನಿರಂತರ ಅಸ್ತಿತ್ವದಲ್ಲಿರಲು ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸಿದ್ದರಾಮಯ್ಯ ಅವರನ್ನೇ ಮುಂದಿನ 2 ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ನೋಡುವುದು ಇಡೀ ರಾಜ್ಯದ ಜನರ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಪ್ಪ ಚಲುವಾದಿ, ಪರಸಪ್ಪ ಹುನಕುಂಟಿ, ಆದಪ್ಪ, ಪ್ರಕಾಶ ಕುರಿ, ಮಂಜುನಾಥ, ಈರಪ್ಪ ದೊಡ್ಡಮನಿ, ಬಸವರಾಜ ಕಟ್ಗಿ, ಗದ್ದೆಪ್ಪ ಈಚನಾಳ ಸೇರಿ ಇತರರು ಉಪಸ್ಥಿತರಿದ್ದರು.




