ಸಿಂಧನೂರು: ಪಡಿತರ ವಿತರಣೆಯಲ್ಲಿ ಮೋಸ ಆರೋಪ; ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ ಮಹಿಳಾ ಸಂಘಟನೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಧಾನ್ಯ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಜಾಗೃತ ಮಹಿಳಾ ಸಂಘಟನೆಯಿಂದ ರಾಯಚೂರಿನ ಅಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳ ಥಮ್ಬ್ ಪಡೆದುಕೊಂಡರೂ ಸಹ ಪಡಿತರ ಧಾನ್ಯ ವಿತರಣೆ ಮಾಡದೆ ವಂಚಿಸಿದ ನ್ಯಾಯಬೆಲೆ ಅಂಗಡಿ ಮಾಲಿಕ ಹುಲಿಗೆಪ್ಪ ಹಿರೇಕಡುಬೂರು ಅವರನ್ನ ಕೂಡಲೇ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗೋರೆಬಾಳ ಗ್ರಾಮದ 59 ಪಡಿತರ ಕಾರ್ಡುಗಳನ್ನು ಪಡೆಕೊಂಡಿದ್ದರೂ ಸಹ ಪಡಿತರ ಧಾನ್ಯ ವಿತರಣೆ ಮಾಡದೇ ಜನರಿಗೆ ಮೋಸ ಮಾಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷೆ ಚಿನ್ನಮ್ಮ, ಹನುಮಂತಿ, ಕರೆಪ್ಪ, ಮೌನೇಶ, ದೇವಮ್ಮ, ಲಚಮಮ್ಮ, ದೇವಪುತ್ರ ಉಪಸ್ಥಿತರಿದ್ದರು.





