ಸಿಂಧನೂರು | ಜ.1ರಂದು ಭೀಮಾ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ: ಎಂ.ಗಂಗಾಧರ್

ಸಿಂಧನೂರು : ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯಬೇಕಿದೆ. ಈ ಹಿನ್ನಲೆಯಲ್ಲಿ ಜ.1ರಂದು ಸಿಂಧನೂರಿನ ಆಚರಣಾ ಸಮಿತಿಯಿಂದ ಭೀಮ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಹೋರಾಟಗಾರ ಎಂ.ಗಂಗಾಧರ್ ಹೇಳಿದರು.
ಸೋಮವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶತ ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದುನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯದೆ ಹೋದರೆ ಚರಿತ್ರೆ ಕ್ಷಮಿಸದು. ಜಾತಿ ಅಸ್ಪೃಶ್ಯತೆ ದಮನ ದಬ್ಬಾಳಿಕೆಯಿಂದ ಕುದಿಯುತ್ತಿದ್ದ ಮಹಾರರು, ಮರಾಠವಾಡದ ಬ್ರಾಹ್ಮಣ ವಾದಿ ಪೇಶ್ವೆಗಳನ್ನು ಮಣ್ಣು ಮುಕ್ಕಿಸಿ ಅಧಿಕಾರದಿಂದ ತೊಲಗಿಸಿದ ವಿರೋಚಿತ ಇತಿಹಾಸವಿದೆ. ಜಾತಿವಾದ, ಅಸ್ಪೃಶ್ಯತೆ ಹಾಗೂ ಸಕಲ ತಾರತಮ್ಯಗಳ ವಿರುದ್ಧ ನಡೆದ ಯುದ್ಧವಾಗಿದೆ. ಈ ಯುದ್ಧದಿಂದ ಮತ್ತು ಇದರ ವಿಜಯದಿಂದ ಈ ನಾಡಿನ ದಲಿತರು ವರ್ತಮಾನದ ಜಾತಿ ವಿನಾಶ, ವರ್ಗವಿನಾಶ, ಸರ್ವ ತಾರತಮ್ಯ ವಿನಾಶಗಳ ಹೋರಾಟಕ್ಕೆ ಮಹಾನ್ ಪ್ರೇರಣೆ ಪಡೆಯಬೇಕಾಗಿದೆ ಎಂದರು.
ಈ ಹಿನ್ನಲೆಯಲ್ಲಿ ಜ.1ರಂದು ಪಟ್ಟಣದಲ್ಲಿ ಭೀಮ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಸಮಾನ ಮನಸ್ಕ ಹಲವಾರು ಸಂಘಟನೆಗಳ ಜಂಟಿ ವೇದಿಕೆಯಾಗಿ ಆಚರಣಾ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಸಮಿತಿಯ ನೇತೃತ್ವದಲ್ಲಿ ಮಧ್ಯಾಹ್ನ 12ಕ್ಕೆ ತಾಲೂಕು ಪಂಚಾಯತ್‌ನಿಂದ "ಜೈ ಭೀಮ್ ರೆಜಿಮೆಂಟ್" ನಿಂದ ಪಿಡಬ್ಲ್ಯೂಡಿ ಕ್ಯಾಂಪ್ ವರೆಗೆ ಪಥಸಂಚಲನ ನಡೆಯಲಿದೆ. ತದನಂತರ ಬಹಿರಂಗ ಸಭೆ ಆಯೋಜಿಸಲಾಗಿದೆ. ಎಲ್ಲಾ ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ವಾದಿಗಳು, ಗಾಂಧಿವಾದಿಗಳು ಬಹಳ ಮುಖ್ಯವಾಗಿ ಪ್ರಜಾಪ್ರಭುತ್ವವಾದಿಗಳು ಬಿಳಿ ಶರ್ಟ್ ಬಿಳಿ ಪ್ಯಾಂಟ್ ಧರಿಸಿಕೊಂಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ ಎನ್ ಬಡಿಗೇರ್, ಮೌನೇಶ್ ಜಾಲವಾಡಿಗಿ, ರಾಮಣ್ಣ ಗೋನವಾರ, ವೆಂಕಟೇಶ್ ಗಿರಿಜಾಲಿ, ನಾರಾಯಣ ಬೆಳಗುರ್ಕಿ, ಹನುಮಂತಪ್ಪ ಹಂಪನಾಳ, ಹನುಮೇಶ್ ಕರ್ನಿ, ಮಹ್ಮದ್ ಆಶೀಪ್, ಪ್ರವೀಣ್ ದುಮತಿ, ವಿರೇಶ್ ಹಂಚಿನಾಳ, ನರಸಪ್ಪ ಕಟ್ಟಿಮನಿ, ಉಮೇಶ್ ಸುಕಲಾಪೇಟೆ, ವಿರುಪಾಕ್ಷಿ ಸಾಸಲಮರಿ ಸೇರಿದಂತೆ ಅನೇಕರು ಇದ್ದರು.







