ಸಿಂಧನೂರು | ನಾಪತ್ತೆಯಾಗಿದ್ದ ಬಂಗಾಲಿ ಕ್ಯಾಂಪ್ ನ ಯುವಕನ ಮೃತದೇಹ ಪತ್ತೆ : ಕೊಲೆ ಶಂಕೆ

ಪ್ರಭೀರ್ ಸರ್ದಾರ್
ಸಿಂಧನೂರು : ನಾಪತ್ತೆಯಾಗಿದ್ದ ಸಿಂಧನೂರಿನ ಬಂಗಾಳಿ ಕ್ಯಾಂಪ್ ನ ಯುವಕ ಪ್ರಭೀರ್ ಸರ್ದಾರ್ ನ ಮೃತದೇಹ ಇಂದಿರಾ ನಗರದ ಖಬರಸ್ಥಾನ್ ಹತ್ತಿರವಿರುವ ಬಳ್ಳಾರಿ ಲೇಔಟ್ ನಲ್ಲಿಪತ್ತೆಯಾಗಿದೆ.
ಮೂಲತಃ ಪ್ರಭೀರ್ ಸರ್ದಾರ್ (32) ಆರ್.ಎಚ್.ನಂ-2 ಕ್ಯಾಂಪಿನ ನಿವಾಸಿಯಾಗಿದ್ದು, ನಗರಸಭೆ ಹತ್ತಿರ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಪ್ರತಿನಿತ್ಯ ಕ್ಯಾಂಪಿನಿಂದ ಅಂಗಡಿಗೆ ಹಾಗೂ ಸಂಜೆ ಅಂಗಡಿಯಿಂದ ಕ್ಯಾಂಪಿಗೆ ತೆರಳುತ್ತಿದ್ದ, ಆದರೆ ಗುರುವಾರ ಸಂಜೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಗರ ಪೊಲೀಸ್ ಠಾಣೆಗೆ ಬಂದು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು ಎನ್ನಲಾಗಿದೆ.
ಶನಿವಾರದಂದು ಇಂದಿರಾ ನಗರದ ಜನರು ಮೃತದೇಹವನ್ನು ಕಂಡು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, 112 ನಲ್ಲಿರುವ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ಯಾವುದಾದರೂ ಕಾಣೆಯಾದ ಪ್ರಕರಣ ದಾಖಲಾಗಿದಿಯೇ ದಾಖಲಾದರೆ ಅಥವಾ ಅಪರಿಚಿತ ಶವವಾದರೆ ಪರಿಶೀಲಿಸುವಂತೆ ಡಿವೈಎಸ್ಪಿ ಚಂದ್ರಶೇಖರ್ ಜಿ ರವರ ಗಮನಕ್ಕೆ ತಂದಾಗ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾಣೆಯಾದ ಬಗ್ಗೆ ದೂರು ನೀಡಿದ್ದ ಪ್ರಭೀರ್ ಸರ್ದಾರ್ ಅವರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಯಿಸಿ ತೋರಿಸಿದಾಗ ಮೃತಪಟ್ಟಿರುವುದು ಪ್ರಭೀರ್ ಸರ್ದಾರ್ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ದುಷ್ಕರ್ಮಿಗಳ ಪತ್ತೆಗಾಗಿ ಜಿಲ್ಲಾ ಶ್ವಾನ ದಳ ಹಾಗೂ ಬೆರಳಚ್ಚು ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದು, ತ್ವರಿತವಾಗಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ನಗರ ಪೊಲೀಸ್ ಠಾಣೆಯ ಪಿಐ ವೀರಾರೆಡ್ಡಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮೌನೇಶ ರಾಠೋಡ್ ಇದ್ದರು.







