ಸಿಂಧನೂರು | ವಿದ್ಯುತ್ ತಗುಲಿ 5ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ತನುಶ್ರೀ
ಸಿಂಧನೂರು : ತಾಲ್ಲೂಕಿನ ಕುರಕುಂದಿ ಗ್ರಾಮದಲ್ಲಿ ವಿದ್ಯುತ್ ತಗುಲಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಕುರಕುಂದಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ತನುಶ್ರೀ ಶ್ಯಾಮಣ್ಣ ಭಜಂತ್ರಿ ಎಂದು ಗುರುತಿಸಲಾಗಿದೆ.
ಶಾಲೆಯಲ್ಲಿ ಬೆಳಿಗ್ಗೆ 11.30ಕ್ಕೆ ವಿರಾಮ ಸಮಯದಲ್ಲಿ ಕುಡಿಯಲು ನೀರು ತರಲು ತೆರಳಿದ್ದ ವೇಳೆ ವಿದ್ಯುತ್ ತಗುಲಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ವಿದ್ಯಾರ್ಥಿನಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದ ಬಳಿಕ ತುರುವಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ಮೃತ ವಿದ್ಯಾರ್ಥಿನಿಯ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡ ಆರ್. ಸಿದ್ದನಗೌಡ ಭೇಟಿ ನೀಡಿ, ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.







