ಸಿಂಧನೂರು | ತುಂಗಭದ್ರಾ ಎಡದಂಡೆ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗಳಿಗೆ ನೀರು ಹರಿಸಲು ಡಿಸಿಎಂ ಜೊತೆ ಚರ್ಚೆ

ಸಿಂಧನೂರು : ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ ಅವರನ್ನು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಹಾಗೂ ರೈತ ಮುಖಂಡರ ನಿಯೋಗದೊಂದಿಗೆ ಭೇಟಿಯಾಗಿ ತುಂಗಭದ್ರಾ ಎಡದಂಡೆ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗಳಿಗೆ ನೀರು ಹರಿಸುವ ಕುರಿತು ಚರ್ಚಿಸಿದರು.
ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಹಣಕಾಸಿನ ನೆರವನ್ನು ನೀರಿಕ್ಷಿಸದೇ ಸರ್ಕಾರವು ಹಣಕಾಸಿನ ನೆರವು ನೀಡಿರುವುದು ಪ್ರಶಂಸನೀಯ ವಿಚಾರ. ಹಾಲಿ ಹಂಗಾಮಿನಲ್ಲಿ ತುಂಗಭದ್ರಾ ಮಂಡಳಿಯವರು 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸಲು ಟೆಂಡರ್ ಪ್ರಕ್ರಿಯೇ ಮುಗಿದು ಕಾಮಗಾರಿ ಪ್ರಗತಿಯಲ್ಲಿದೆ. ತುಂಗಭದ್ರಾ ಬೋರ್ಡ್ ನ ಮುಂಗಾರು ಹಂಗಾಮಿಗೆ ಜೂನ್ ತಿಂಗಳಿನಿಂದ ಅ.30ರವರೆಗೆ ಸಂಗ್ರಹವಾದ ನೀರಿನ ಆಧಾರದ ಅಂದಾಜಿನ ಮೇಲೆ ಲೆಕ್ಕಾಚಾರ ಮಾಡಿ ಜೂ.6ರಂದು ನಡೆಸಿದ ಐಸಿಸಿ ಸಭೆಯಲ್ಲಿ ಮುಂಗಾರು ಬೆಳೆಗೆ ನೀರು ಬಿಡಲು ತೀರ್ಮಾನಿಸಲಾಗಿತ್ತು.
ಪ್ರಸಕ್ತ ವರ್ಷ ಅತಿಯಾದ ಮಳೆಯಿಂದಾಗಿ ರೈತರು ಮುಂಗಾರಿನಲ್ಲಿ ಬೆಳೆದ ಬೆಳೆಗಳು ಕೂಡ ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದ್ದು, ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹ ಇದೆ. ಜೊತೆಗೆ ಸತತವಾಗಿ ಜಲಾಶಯಕ್ಕೆ ನೀರಿನ ಒಳಹರಿವು ಚಾಲ್ತಿಯಲ್ಲಿದೆ. ಅಂದಾಜಿನ ಪ್ರಕಾರ ಒಳಹರಿವು ಮುಂದುವರೆಯುವ ನಿರಿಕ್ಷೆಯಿದೆ.
ಜಲಾಶಯದಲ್ಲಿ ಸಂಗ್ರಹವಾಗಿರುವ 80 ಟಿಎಂಸಿ ನೀರಿನಲ್ಲಿ ಕರ್ನಾಟಕದ ಪಾಲಿಗೆ ಸುಮಾರು 45 ಟಿಎಂಸಿ ನೀರು ಲಭ್ಯವಾಗಬಹುದಾಗಿದೆ. ಜೊತೆಗೆ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನೀರಿನ ಒಳಹರಿವನ್ನು ನಾವು ನಿರೀಕ್ಷಿಸಬಹುದಾಗಿದೆ. ಡಿ.1ರ, 2025 ರಿಂದ ಮಾ.31ರ, 2026ರವರೆಗೆ ನೀರು ಹರಿಸಲು ಸಾಧ್ಯವಾಗಬಹುದಾಗಿದೆ. ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವನ್ನು ಜ.1ರ, 2026ರ ಬದಲಾಗಿ, ಫೆ.1, 2026ರಿಂದ ಪ್ರಾರಂಭಿಸಿ ಎ.30ಕ್ಕೆ ಮುಗಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.







