ಸಿಎಂ ಆಗಮನದ ಹಿನ್ನಲೆಯಲ್ಲಿ ತರಾತುರಿ ರಸ್ತೆ ಕಾಮಗಾರಿ: ಸಿಂಧನೂರಿನಲ್ಲಿ ಕಳಪೆ ಡಾಂಬರೀಕರಣ ಆರೋಪ

ಸಿಂಧನೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.3ರಂದು ಸಿಂಧನೂರು ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ತರಾತುರಿಯಲ್ಲಿ ಕೈಗೆತ್ತಿಕೊಂಡಿರುವ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಕಳಪೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದ ರಸ್ತೆಗಳಲ್ಲಿ ತಗ್ಗುದಿನ್ನಿಗಳು ಹಾಗೂ ಧೂಳಿನ ಸಮಸ್ಯೆಯಿಂದ ಇಷ್ಟು ದಿನಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಪಕ್ಕದ ಮಣ್ಣು ತೆರವುಗೊಳಿಸಲು ಮುಂದಾಗಿರದ ಅಧಿಕಾರಿಗಳು, ಮುಖ್ಯಮಂತ್ರಿ ಆಗಮನದ ಸುದ್ದಿ ಹೊರಬೀಳುತ್ತಿದ್ದಂತೆ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ನಗರಸಭೆ ಹಾಗೂ ವಿವಿಧ ಇಲಾಖೆಗಳಿಂದ ತೇಪೆ ಕಾರ್ಯಗಳಿಗೆ ಮುಂದಾಗಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ನಗರದ ಮಹಾತ್ಮ ಗಾಂಧಿವೃತ್ತದಿಂದ ಬಸವವೃತ್ತದ ಮಾರ್ಗವಾಗಿ ಸುಮಾರು 1 ಕೋಟಿ 55 ಲಕ್ಷ ರೂ. ವೆಚ್ಚದಲ್ಲಿ 800 ಮೀಟರ್ ಉದ್ದದ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಕೇವಲ ನಾಮಕಾವಾಸ್ತೆಯಾಗಿದೆ. ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಡಾಂಬರೀಕರಣ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಕಾಮಗಾರಿ ಸ್ಥಳದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೇ ಹಾಜರಿಲ್ಲದಿರುವುದರಿಂದ ಗುಣಮಟ್ಟದ ಕೆಲಸ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಇಂತಹ ತಾತ್ಕಾಲಿಕ ಮತ್ತು ಕಳಪೆ ಕಾಮಗಾರಿಗಳು ನಗರಕ್ಕೆ ಶಾಶ್ವತ ಪರಿಹಾರ ನೀಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







