ಸಿಂಧನೂರು | ಆಲಿಕಲ್ಲು ಸಹಿತ ಭಾರಿ ಮಳೆ: ಜೋಳ ಬೆಳೆಗಾರರಲ್ಲಿ ಆತಂಕ

ಸಿಂಧನೂರು: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೋಮವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.
ಸೋಮವಾರ ಮಧ್ಯಾಹ್ನ 4 ಗಂಟೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 5 ಗಂಟೆ ಸುಮಾರಿಗೆ ಮಳೆ ಆರಂಭವಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಿರುಬಿಸಿಯಿಂದ ಕಂಗೆಟ್ಟಿದ್ದ ಜನರು ಏಕಾಏಕಿ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಸಂತಸಪಟ್ಟರು.
ಮಳೆ ಜೊತೆಗೆ ಸುರಿದ ಆಲಿಕಲ್ಲುಗಳು ಕೆಲವೇ ನಿಮಿಷಗಳಲ್ಲಿ ನೆಲದ ಮೇಲೆ ರಾಶಿಯಾಗಿ ಸಂಗ್ರಹಗೊಂಡಿದ್ದವು. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ತೊಂದರೆ ಅನುಭವಿಸಿದರು.
ರೈತರಲ್ಲಿ ಆತಂಕ :
ಸೋಮವಾರ ಸುರಿದ ಮಳೆಯಿಂದ ಜೋಳ ಬೆಳೆದ ರೈತರು ಆತಂಕಗೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಟಾವು ಮಾಡಿದ ಜೋಳವನ್ನು ಮನೆ ಮುಂದೆ ಹಾಗೂ ವಿವಿಧ ಕಡೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದರಿಂದ ಅದನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಟ್ಟರು. ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಜೋಳ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಜೋಳವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮುಂದಾಗಿರುವುದು ಕಂಡುಬಂದಿದೆ.





