ಸಿಂಧನೂರು | ತುರ್ವಿಹಾಳ ಪೊಲೀಸರಿಂದ ದೌರ್ಜನ್ಯ ಆರೋಪ: ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು

ಸಿಂಧನೂರು: ತಾಲೂಕಿನ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಸೈ ಹಾಗೂ ಕೆಲ ಸಿಬ್ಬಂದಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಈ ಘಟನೆಯನ್ನು ಖಂಡಿಸಿ ಸಿಂಧನೂರು ತಾಲೂಕು ನ್ಯಾಯವಾದಿಗಳ ಸಂಘ ವ್ಯಾಪ್ತಿಯ ನ್ಯಾಯವಾದಿಗಳು ಸೋಮವಾರ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದ್ದಾರೆ.
ಏನಿದು ಘಟನೆ ?
ಪ್ರಕರಣವೊಂದರ ಕುರಿತಂತೆ ತುರ್ವಿಹಾಳ ಪಟ್ಟಣದ ವಕೀಲ ಅರಳಯ್ಯ ಎಂಬವರ ಸಹೋದರನಿಂದ ಪೊಲೀಸರು ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆನ್ನಲಾಗಿದ್ದು, ಇದಕ್ಕೆ ಅರಳಯ್ಯ ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಠಾಣೆಯ ಪೊಲೀಸರು ಅರಳಯ್ಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ವಿಡಿಯೋ ವೈರಲ್: ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ವಕೀಲ ಹಾಗೂ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಐ, ಸಿಬ್ಬಂದಿ ಪರಸ್ಪರ ಮಾತಿನ ಚಕಮಕಿ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದ್ದು, ಘಟನೆ ಕುರಿತಂತೆ ಪೊಲೀಸರ ವಿರುದ್ಧ ವಕೀಲರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.




