ಸಿಂಧನೂರು: ಫೆಲಸ್ತೀನ್ ಮೇಲೆ ಇಸ್ರೇಲ್‌ನ ದಾಳಿ ಖಂಡಿಸಿ ಎಡ ಪಕ್ಷಗಳಿಂದ ಪ್ರತಿಭಟನೆ

ರಾಯಚೂರು: ಫೆಲಸ್ತೀನ್ ಜನತೆಯ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ, ಇಸ್ರೇಲ್ ಸರ್ಕಾರ ಜನಾಂಗೀಯ ಹತ್ಯೆ, ಯುದ್ಧ ಅಪರಾಧ ಹಾಗೂ ಪೈಶಾಚಿಕ ದಾಳಿಯನ್ನು ಖಂಡಿಸಿ, ರಾಷ್ಟ್ರೀಯ ಕರೆಯ ಹಿನ್ನೆಲೆಯಲ್ಲಿ ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಶನ್, ಎಸ್ಯುಸಿಐ(ಸಿ) ಮುಖಂಡರು ನಗರದ ಗಾಂಧಿ ಸರ್ಕಲ್ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ 20 ತಿಂಗಳಿಂದ ಇಸ್ರೇಲ್ ನ ನಿರಂತರ ಬಾಂಬ್ ದಾಳಿ ಮತ್ತು ಮಿಲಿಟರಿ ಆಕ್ರಮಣದಿಂದ 55,000 ಕ್ಕೂ ಹೆಚ್ಚು ಫೆಲಸ್ತೀನಿಯನ್ನರು ಹತರಾಗಿದ್ದಾರೆ. ಅವರಲ್ಲಿ ಬಹುಪಾಲು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಅಗತ್ಯ ಮೂಲಸೌಕರ್ಯಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತರ ಆಶ್ರಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದ್ದು, ದಿನವೂ ಗಾಝಾದ ಜನರ ನರಮೇಧ ನಡೆಯುತ್ತಿದೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯ ಸೇರಿದಂತೆ ಜಾಗತಿಕವಾಗಿ ಹೆಚ್ಚುತ್ತಿರುವ ಆಕ್ರೋಶದ ಹೊರತಾಗಿಯೂ, ನೆತನ್ಯಾಹು ಸರ್ಕಾರವು ಅಮೆರಿಕ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಭಯದಿಂದ ತನ್ನ ಕ್ರೂರ ಅಭಿಯಾನವನ್ನು ಮುಂದುವರಿಸಿರುವುದು ಮಾನವೀಯತೆ ಮೇಲಿನ ದೊಡ್ಡ ಹೊಡೆತವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇಸ್ರೇಲ್ ಸರ್ಕಾರ ಮಾಡಿದ ನರಮೇಧ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ರಾಷ್ಟ್ರತ್ವ, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಫೆಲಸ್ತೀನ್ ಜನರ ನ್ಯಾಯಯುತ ಹೋರಾಟಕ್ಕೆ ಭಾರತ ಸರ್ಕಾರವು ತಾತ್ವಿಕ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಇಸ್ರೇಲ್ ನೊಂದಿಗಿನ ಎಲ್ಲಾ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು. ನರಮೇಧ, ವರ್ಣಭೇದ ನೀತಿ ಮತ್ತು ಆಕ್ರಮಣದ ವಿರುದ್ಧ ಭಾರತದ ಜನರ ಧ್ವನಿಯನ್ನು ಎತ್ತರಿಸಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಬಾಷುಮಿಯಾ, ಸಿಪಿಐಎಂ ಮುಖಂಡರ, ಎಸ್. ದೇವೇಂದ್ರ ಗೌಡ, ಸಿಪಿಐಎಂಎಲ್ ಲಿಬರೇಶನ್ನ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ಎಐಸಿಸಿಯುನ ಜಿಲ್ಲಾ ಮುಖಂಡ ಬಸವರಾಜ ಎಕ್ಕಿ, ಸಮುದಾಯದ ಎಂ.ಗೋಪಾಲಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ಶಕುಂತಲಾ ಪಾಟೀಲ್, ಮುಖಂಡರಾದ ಅಝೀಝ್ ಜಾಗೀದಾರ, ಆರ್.ಎಚ್ ಕಲಮಂಗಿ, ಸೇರಿದಂತೆ ವಿವಿಧ ಎಡ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







