ಸಿಂಧನೂರು | ಜೋಳ ಖರೀದಿಗೆ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಸಭೆ

ಸಿಂಧನೂರು (ರಾಯಚೂರು) : ಜೂ.30ರೊಳಗೆ 3.70 ಲಕ್ಷ ಕ್ವಿಂಟಲ್ ಜೋಳ ಖರೀದಿಗೆ ಸರ್ಕಾರ ಆದೇಶ ಮಾಡಿದ್ದು, ಗುಣಮಟ್ಟದ ಜೋಳ ಕೊಡುವ ಬಗ್ಗೆ ರೈತರು ತಿಳಿಸಿದ್ದು, ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಸೋಮವಾರ ಸಿಂಧನೂರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ, ರಾಜ್ಯ ಉಗ್ರಾಣ ನಿಗಮ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಹಿಂಗಾರು ಮತ್ತು ಮುಂಗಾರು ಜೋಳದ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಎಡೆ ಮಾಡಿಕೊಡದೇ ರಾಜ್ಯ ಸರ್ಕಾರದ ಆದೇಶನ್ವಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಗ್ರೇಡರ್ ಗಳು ಸಹಕಾರಿ ಸಂಘಗಳಿಗೆ ಬಂದು ಜೋಳದ ಗುಣಮಟ್ಟದ ಪರಿಶೀಲನೆ ನಡೆಸಿ, ಉಗ್ರಾಣಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜೋಳವನ್ನು ಹಿಂದಕ್ಕೆ ಕಳುಹಿಸಬಾರದು ಎಂದರು.
ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣ, ತಹಶೀಲ್ದಾರ್ ಅರುಣ್ ಹೆಚ್.ದೇಸಾಯಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕ ಆಶಿಕ್ ಅಲಿ, ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಪ್ರಕಾಶ್ ಬಾಬು, ರಾಜ್ಯ ಉಗ್ರಾಣ ನಿಗಮದ ವಿಭಾಗೀಯ ವ್ಯವಸ್ಥಾಪಕ ಜಯತೀರ್ಥ, ತಾಪಂ ಇಓ ಚಂದ್ರಶೇಖರ, ಆಹಾರ ಇಲಾಖೆಯ ಶಿರಸ್ತೆದಾರ ಆನಂದ ಮೋಹನ್, ನಿರೀಕ್ಷಕ ಹನುಮೇಶ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.