ಸಿಂಧನೂರು | ಅಧಿಕಾರಿಗಳ ದಾಳಿ: ಸುರಕ್ಷತಾ ನಿಯಮ ಪಾಲಿಸದ ಶಾಲಾ ವಾಹನಗಳ ಜಪ್ತಿ

ಸಿಂಧನೂರು.ಡಿ.21: ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ರಾಕೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ರಸ್ತೆ ಸುರಕ್ಷತಾ ನಿಯಮ ಪಾಲಿಸದ 5 ಖಾಸಗಿ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಅಕ್ಷರ ಸ್ಮಾರ್ಟ್ ಶಾಲೆಯ 2 ವಾಹನ, ಅರಗಿನಮರದ ವೆಂಕಟೇಶ್ವರ ಶಾಲೆಯ 2 ವಾಹನ, ಇಂದಿರಾ ಪ್ರಿಯಾದರ್ಶಿನಿಯ ಶಾಲೆಯ 1 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಂಡಿಎನ್ ಪ್ಯೂಚರ್ ಶಾಲೆ, ಅರಗಿನಮರದ ಜ್ಞಾನಜ್ಯೋತಿ ಸೇರಿದಂತೆ ವಿವಿಧ ಶಾಲೆಗಳ 9 ವಾಹನಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ನೊಂದಣಿ ಪತ್ರ, ವಾಹನದ ವಿಮೆ, ಹೊಗೆ ಪ್ರಮಾಣ ಪತ್ರ, ವಾಹನ ಪರವಾನಿಗೆ, ಚಾಲನಾ ಪರವಾನಿಗೆ, ಅಗ್ನಿಶಾಮಕ ನಂದಕ, ತುರ್ತು ಬಾಗಿಲು, ಪ್ಯಾನಿಕ್ ಬಟನ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸಂಚರಿಸುವ ಮಕ್ಕಳ ವಿವರ, ಚಾಲಕರ ಸಮವಸ್ತ್ರ ಸೇರಿದಂತೆ ಇನ್ನಿತರ ನಿಯಮಗಳನ್ನು ಪಾಲಿಸದ ಶಾಲಾ ವಾಹನಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಜಂಟಿ ಆಯುಕ್ತರ ಸೂಚನೆ ಹಿನ್ನಲೆಯಲ್ಲಿ ಸಾರಿಗೆ ನಿಯಮ ಪಾಲಿಸದ ಸಿಂಧನೂರಿನ ವಿವಿಧ ಖಾಸಗಿ ಶಾಲಾ ವಾಹನಗಳ ತಪಾಸಣೆ ನಡೆಸಿ, ಶಾಲಾ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಶೀಘ್ರವೇ ನಿಯಮಾನುಸಾರ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ತಾಳಿದರೆ ಇಲಾಖೆಯಿಂದ ಕಠಿಣ ಕ್ರಮಕೈಗೊಳ್ಳಲಾಗುವುದು.
-ರಾಕೇಶ ಎಂ. ಮೋಟಾರ್ ವಾಹನ ನಿರೀಕ್ಷಕರು, ಸಾರಿಗೆ ಇಲಾಖೆ ರಾಯಚೂರು.







