Sindhanur | ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಆಗ್ರಹಿಸಿ ಮೇ 30ರಂದು ಪ್ರತಿಭಟನೆ

ಸಿಂಧನೂರು: ಎಸ್ಐಆರ್ ವಿರೋಧಿ ಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ, ಎಸ್ಐಆರ್ ಎಂಬ “ಅಸಂವಿಧಾನಿಕ, ಅವೈಜ್ಞಾನಿಕ ಹಾಗೂ ದುರುದ್ದೇಶಪೂರಿತ” ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮೇ 30ರಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಐಆರ್ ವಿರೋಧಿ ಕರ್ನಾಟಕದ ಸಂಚಾಲಕ ಬಸವರಾಜ ಬಾದರ್ಲಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು. ಸಂವಿಧಾನಬದ್ಧ ಹಾಗೂ ಜನಸ್ನೇಹಿ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಯಾಗಬೇಕು. ದಾಖಲೆಗಳ ನೆಪದಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದನ್ನು ಕರ್ನಾಟಕ ಒಪ್ಪುವುದಿಲ್ಲ,” ಎಂದು ಹೇಳಿದರು.
ನಾರಾಯಣ ಬೆಳಗುರ್ಕಿ ಮಾತನಾಡಿ, ರಾಜ್ಯದ ಮತದಾರರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಜನರ ಪರ ನಿಲ್ಲಬೇಕು. ಜನವಿರೋಧಿ ಎಸ್ಐಆರ್ ವಿರುದ್ಧ ಸರ್ಕಾರ ದಿಟ್ಟ ನಿಲುವು ತಾಳಬೇಕೆಂದು ಒತ್ತಾಯಿಸಿದರು.
“ರಾಜ್ಯ ಚುನಾವಣಾ ಆಯೋಗದ ಮೂಲಕ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಿ ಸಾರ್ವಜನಿಕ ಪರಿಶೀಲನೆಯೊಂದಿಗೆ ನಿಖರ ಮತದಾರರ ಪಟ್ಟಿ ಸಿದ್ಧಪಡಿಸಬೇಕು,” ಎಂದು ಅವರು ಆಗ್ರಹಿಸಿದರು.
ಟಿ. ಹುಸೇನ್ ಸಾಬ್ ಮಾತನಾಡಿ, “ಎಸ್‌ಐಆರ್ ಮೂಲಕ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲಾಗಿದೆ. ಇದು ಸಂವಿಧಾನಾತ್ಮಕ ಅಪರಾಧ,” ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರದಬ್ಬಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಎಸ್ಐಆರ್ ವಿರೋಧ ಒಕ್ಕೂಟದ ಸಂಚಾಲಕರಾದ ಹೆಚ್.ಎನ್.ಬಡಿಗೇರ, ಡಾ.ವಸೀಂ ಅಹ್ಮದ್, ಮಂಜುನಾಥ ಗಾಂಧಿನಗರ, ಅಬುಲೇಸ್ ನಾಯಕ್, ಅಸ್ಲಾಂಪಾಷಾ ಇತರರು ಇದ್ದರು.






