ಸಿಂಧನೂರು | ಅಪರಾಧ ತಡೆಯಲು ಸಾರ್ವಜನಿಕರ ಸಹಭಾಗಿತ್ವ ಅವಶ್ಯಕ: ಎಸ್ಪಿ

ಸಿಂಧನೂರು: ನಾಗರೀಕತೆ ಬೆಳೆದಂತೆ ಅಪಾಯ, ಅಪರಾಧ ಪ್ರಕರಣಗಳು ಹೆಚ್ಚಾಗಿದೆ. ಅಪರಾಧ ಪ್ರಕರಣಗಳನ್ನು ತಡೆಯಲು ಇಲಾಖೆ ಸನ್ನದ್ಧವಾಗಿದ್ದು, ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ಶುಕ್ರವಾರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಗರ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಾಗಿ ಜಾಗೃತಿ ಮರೆಯಾಗುತ್ತಿದೆ. ಅತಿಹೆಚ್ಚು ಮೊಬೈಲ್ ಬಳಕೆಯಿಂದ ಮನುಕುಲ ನಲುಗುತ್ತಿದೆ. ಇದರ ಕಡಿವಾಣ ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಅನುಕೂಲಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು ಎಂದರು.
ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಅರ್ಥೈಸಿಕೊಂಡು ಇಲಾಖೆಗೆ ಸಹಕಾರ ನೀಡಬೇಕು. 18 ವರ್ಷದೊಳಗಿನ ಮಕ್ಕಳಿಗೆ ವಾಹನ ನೀಡಬಾರದು. ಜಾಗೃತಿ, ಅರಿವು ಮತ್ತು ರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಅಂದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಶೇಖರ, ನಗರ ಠಾಣೆಯ ಪಿಐ ವೀರಾರೆಡ್ಡಿ, ಸಂಚಾರಿ ಠಾಣೆ ಪಿಎಸ್ಐ ಚಂದ್ರಶೇಖರ ಹಿರೇಮಠ ಸೇರಿದಂತೆ ಹಲವರು ಇದ್ದರು.





