Sindhanur | ಅಕ್ರಮ ಮದ್ಯ, ಕಳ್ಳಬಟ್ಟಿ ವಿರುದ್ಧ ಕಠಿಣ ಕ್ರಮ : ಜಂಟಿ ಆಯುಕ್ತೆ ನಿರ್ಮಲಾ ಎನ್.

ಸಾಂದರ್ಭಿಕ ಚಿತ್ರ
ಸಿಂಧನೂರು : ಅಬಕಾರಿ ಇಲಾಖೆ ಅಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡಬೇಕು. ರಾಯಚೂರು ಜಿಲ್ಲೆಯಲ್ಲಿ ಕಳ್ಳಬಟ್ಟಿ ತಯಾರಿಕೆ, ಸೇಂದಿ ಸಾಗಾಣಿಕೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ. ಅಧಿಕಾರಿಗಳ ವಿರುದ್ಧ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ವಿಭಾಗದ ಜಂಟಿ ಆಯುಕ್ತೆ ನಿರ್ಮಲಾ ಎನ್. ಎಚ್ಚರಿಕೆ ನೀಡಿದರು.
ನಗರದ ಅಬಕಾರಿ ಇಲಾಖೆಗೆ ಗುರುವಾರ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಸ್ಕಿ ಹಾಗೂ ಲಿಂಗಸುಗೂರು ಭಾಗದ ಕೆಲವು ತಾಂಡಾಗಳಲ್ಲಿ ಬಹಿರಂಗವಾಗಿ ಕಳ್ಳಬಟ್ಟಿ ತಯಾರಿಸಿ ನಗರ ಪ್ರದೇಶಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ ಎಂದು ಹೇಳಿದರು.
ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳದಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಗಡಿಭಾಗಗಳಿಂದ ಸಿಂದನೂರು ಮತ್ತು ಲಿಂಗಸುಗೂರು ತಾಲೂಕಿನ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಸಾಗಾಣಿಕೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕಾನೂನುಬಾಹಿರ ಮದ್ಯ ಸಾಗಾಟಕ್ಕೆ ಅವಕಾಶವಿಲ್ಲ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ನಿಯಮಾನುಸಾರ ಮದ್ಯದ ಅಂಗಡಿಗಳು ನಿಗದಿತ ಸಮಯಕ್ಕೆ ಮಾತ್ರ ತೆರೆಯಬೇಕು. ಸೂರ್ಯೋದಯಕ್ಕೂ ಮುನ್ನವೇ ಬಾರ್ಗಳು ತೆರೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದು, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಅಬಕಾರಿ ನಿರೀಕ್ಷಕ ಗಂಗಾಧರ ಬಡಿಗೇರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಶುದ್ಧ ನೀರು ಮತ್ತು ರಾಸಾಯನಿಕ ಬಳಸಿ ಕೈ ಹೆಂಡ ತಯಾರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತುಂಗಭದ್ರಾ ನದಿ ಬತ್ತಿರುವ ಹಿನ್ನೆಲೆ ಆಂಧ್ರ ಪ್ರದೇಶ ಗಡಿಭಾಗಗಳಿಂದ ಆಯನೂರು ಗ್ರಾಮಕ್ಕೆ ಸೇಂದಿ ಬರುತ್ತಿರುವ ಕುರಿತು ಜಂಟಿ ಆಯುಕ್ತರು ಅಬಕಾರಿ ನಿರೀಕ್ಷಕ ಗಂಗಾಧರ ಬಡಿಗೇರ್ ಅವರನ್ನು ಪ್ರಶ್ನಿಸಿದರು. ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಉತ್ತರಿಸಿದರು.
ಗಡಿಭಾಗಗಳಲ್ಲಿ ಜಾಗೃತಿ ಹೆಚ್ಚಿಸಿ ಅನ್ಯ ರಾಜ್ಯಗಳಿಂದ ಸೇಂದಿ, ಕಳ್ಳಬಟ್ಟಿ ಹಾಗೂ ಅಕ್ರಮ ಮದ್ಯ ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.






