ಸಿಂಧನೂರು | ತುರ್ವಿಹಾಳ ಪಟ್ಟಣ ಪಂಚಾಯತ್ ಉಪಚುನಾವಣೆ : ಶೇ.80ರಷ್ಟು ಶಾಂತಿಯುತ ಮತದಾನ

ಸಿಂಧನೂರು, ಡಿ.21: ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ 4ನೇ ವಾರ್ಡಿಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇ.80ರಷ್ಟು ಶಾಂತಿಯುತ ಮತದಾನವಾಗಿದೆ.
ಸದಸ್ಯ ಡಿ.ಶಂಕರಗೌಡ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ತೆರವಾಗಿದ್ದ 4ನೇ ವಾರ್ಡಿಗೆ ಉಪಚುನಾವಣೆ ನಡೆಯಿತು. ಹಿಂದುಳಿದ ವರ್ಗ(ಅ)ಕ್ಕೆ ಮೀಸಲಾದ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬಾಲಾಜಿ ಮಡಿವಾಳ, ಭಾರತೀಯ ಜನತಾ ಪಾರ್ಟಿಯಿಂದ ಮುನಿಯಪ್ಪ ಸ್ಪರ್ಧಿಸಿದ್ದರು.
ಪಟ್ಟಣದ ಕೋಟೆ ಶಾಲೆಯ ಮತಗಟ್ಟೆಯಲ್ಲಿ 919 ಮತದಾರರ ಪೈಕಿ 356 ಪುರುಷ ಹಾಗೂ 379 ಮಹಿಳಾ ಮತದಾರರು ಸೇರಿ 735 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬುಧವಾರ ಮತಎಣಿಕೆ ನಡೆಯಲಿದೆ.
14 ಸ್ಥಾನ ಬಲದ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಈಗಾಗಲೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೂ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸ್ವಗ್ರಾಮವಾಗಿರುವುದರಿಂದ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಎರಡು ಪಕ್ಷಗಳ ಮುಖಂಡರು, ನಾಯಕರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶತಾಯ-ಗತಾಯ ಪ್ರಯತ್ನಿಸಿದ್ದಾರೆ.







