Sindhanur | ಸಾಲ ಬಾಧೆ ತಾಳಲಾರದೆ ಜ್ಯುವೆಲರ್ ಮಾಲಕ ಆತ್ಮಹತ್ಯೆ

ಪ್ರಾಣೇಶ ವರ್ಣೇಕರ್
ಸಿಂಧನೂರು: ಸಾಲದ ಬಾಧೆ ಹಾಗೂ ವ್ಯಾಪಾರ ನಷ್ಟದಿಂದ ಮನನೊಂದ ನಗರದ ಹಳೆಬಜಾರ್ನ ಸಮರ್ಥ ಜ್ಯುವೆಲರ್ ಮಾಲೀಕ ಪ್ರಾಣೇಶ ವರ್ಣೇಕರ್ (41) ಸೋಮವಾರ ಬೆಳಗಿನ ಜಾವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಣೇಶ ಅವರ ತಾಯಿ ಮಂಜುಳಾ ಅವರು ಬೆಳಿಗ್ಗೆ ಮಗನಿಗೆ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಬಳಿಕ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕರೆ ಮಾಡಿದಾಗ ಪ್ರಾಣೇಶ ಅಂಗಡಿಗೆ ಬಂದಿಲ್ಲ ಎಂದು ತಿಳಿಸಿದ್ದಾನೆ. ಅನುಮಾನಗೊಂಡ ಕುಟುಂಬಸ್ಥರು ಮನೆಯ ಕೋಣೆಯಲ್ಲಿ ಪರಿಶೀಲಿಸಿದಾಗ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪ್ರಾಣೇಶ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ಮುನ್ನ ಬರೆದಿಟ್ಟ ಪತ್ರದಲ್ಲಿ, “ನನಗೆ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಸಾಲವಿದೆ. ಬಂಗಾರದ ದರದಲ್ಲಿ ಆಗುತ್ತಿರುವ ಏರಿಳಿತದಿಂದ ಅಂಗಡಿ ನಡೆಸುವುದು ಕಷ್ಟವಾಗಿದೆ. ಹಲವರಿಗೆ ಹಣ ಕೊಡಬೇಕಿದ್ದು, ಮೂವರು ವ್ಯಾಪಾರಿಗಳಿಂದ ಕಿರುಕುಳ ಹೆಚ್ಚಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ ಜಿ. ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.
ಮೃತನ ಸಹೋದರಿ ಸ್ವಪ್ನ ವಿವೇಕ ಜನ್ನು ನೀಡಿದ ದೂರಿನ ಮೇರೆಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






