ಸಿಂಧನೂರು | ನಗರಸಭೆ ಅಧ್ಯಕ್ಷರಾಗಿ ಪ್ರಿಯಾಂಕ ವಿಠ್ಠಲ್ ರಾವ್, ಉಪಾಧ್ಯಕ್ಷರಾಗಿ ಮಂಜುಳಾ ಪ್ರಭುರಾಜ್ ಅವಿರೋಧ ಆಯ್ಕೆ

ಸಿಂಧನೂರು : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು, ನೂತನ ಅಧ್ಯಕ್ಷರಾಗಿ ಪ್ರಿಯಾಂಕ ವಿಠ್ಠಲರಾವ್, ಉಪಾಧ್ಯಕ್ಷರಾಗಿ ಮಂಜುಳಾ ಪ್ರಭುರಾಜ್ ಅವಿರೋಧವಾಗಿ ಆಯ್ಕೆಯಾದರು.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ಪ್ರಿಯಾಂಕ, ಉಪಾಧ್ಯಕ್ಷರಾಗಿ ಮಂಜುಳಾ ಪ್ರಭುರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಲಿಂಗಸೂಗುರು ಸಹಾಯಕ ಆಯುಕ್ತ, ಚುನಾವಣಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಅವರು ಘೋಷಿಸಿದರು.
ಒಟ್ಟು 35 ನಗರಸಭೆ ಸದಸ್ಯರು, ನಾಮನಿರ್ದೇಶನ ಸದಸ್ಯರ ಪೈಕಿ 24 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರೆ, 11 ಜನ ಸದಸ್ಯರು ಗೈರು ಹಾಜರಾಗಿದ್ದರು. ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಇದ್ದರು.
ಸಂಭ್ರಮಾಚರಣೆ :
ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಅಭಿನಂದಿಸಿದರು.
'ಕೈ' ಗೆ ಅಧಿಕಾರ :
ಜೆಡಿಎಸ್ ಯಿಂದ ನಗರಸಭೆ ಸದಸ್ಯರಾಗಿರುವ ಪ್ರಿಯಾಂಕ ಅವರನ್ನು ಕಾಂಗ್ರೆಸ್ ಬೆಂಬಲಿಸಿ ಅಧ್ಯಕ್ಷ ಸ್ಥಾನ ದೊರಕಿಸಿಕೊಟ್ಟಿದ್ದು, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಎರಡು ಸ್ಥಾನವನ್ನು ಮಹಿಳೆ ಮಣಿಗಳೇ ಅಲಂಕರಿಸಿದ್ದು, ನಗರಸಭೆ ಗದ್ದುಗೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ ಎನ್ನುವ ಮಾತುಗಳು ಕೇಳಿಬಂದವು.







