ಸಿಂಧನೂರು | ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ತಪ್ಪಿಸಲು ಮನವಿ

ಸಿಂಧನೂರು : ಬೀದಿ ಬದಿ ವ್ಯಾಪಾರಸ್ಥರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯು ಬುಧವಾರ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐರಿಗೆ ಮನವಿ ಸಲ್ಲಿಸಿತು.
ನಗರದ ಗಂಗಾವತಿ, ಕುಷ್ಟಗಿ, ರಾಯಚೂರು, ಮಸ್ಕಿ, ಹಳೇಬಜಾರ್, ಸುಕಾಲಪೇಟೆ ಮುಖ್ಯರಸ್ತೆಗಳ ಅಕ್ಕ-ಪಕ್ಕದಲ್ಲಿ ಹಲವು ದಶಕಗಳಿಂದ ಶೆಡ್, ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವಿವಿಧ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿ ಬೀದಿಬದಿ ವ್ಯಾಪಾರಸ್ಥರು ಜೀವನ ನಡೆಸುತ್ತಿದ್ದರು. ಆದರೆ ತಾಲ್ಲೂಕಾಡಳಿತ, ನಗರಸಭೆ ನ್ಯಾಯಾಲಯದ ಆದೇಶ ನೆಪವೊಡ್ಡಿ ಎಲ್ಲಾ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿದೆ. ಸುಮಾರು 2,500ಕ್ಕೂ ಅಧಿಕ ಕುಟುಂಬಗಳ ಬದುಕು ಅತಂತ್ರ ಸ್ಥಿತಿಗೆ ಸಿಲುಕಿದೆ ಎಂದು ಸಮಿತಿಯ ಸಂಚಾಲಕ ನಾಗರಾಜ್ ಪೂಜಾರ್ ಕಳವಳ ವ್ಯಕ್ತಪಡಿಸಿದರು.
ಕಳೆದ ಒಂದುವರೆ ತಿಂಗಳಿನಿಂದ ದುಡಿಮೆ ಇಲ್ಲದೆ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ವ್ಯಾಪಾರಕ್ಕಾಗಿ ಪಡೆದ ಸಾಲವನ್ನು ಪಾವತಿಸುವಂತೆ ಮೈಕ್ರೋ ಫೈನಾನ್ಸ್ಗಳು, ಧರ್ಮಸ್ಥಳ ಗುಂಪಿನವರು ಪ್ರತಿನಿತ್ಯ ಮನೆಗೆ ಬಂದು ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಡಿವೈಡರ್ನಿಂದ 15 ಮೀಟರ್ ನಂತರ ತಳ್ಳುವ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಹಕ್ಕನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ. ಜೊತೆಗೆ ಪೊಲೀಸ್ ಆಯುಕ್ತರು ನ್ಯಾಯಾಲಯದ ಆದೇಶ ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ಸಿಂಧನೂರಿನಲ್ಲಿ ರಸ್ತೆಗಳ ಬದಿಗಳಲ್ಲಿ ತಳ್ಳುವ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಪೊಲೀಸರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ. ತಕ್ಕಡಿಗಳನ್ನು ತೆಗೆದುಕೊಂಡು ಹೋಗಿ ದಂಡ ಹಾಕುತ್ತಿದ್ದಾರೆ. ದಿನಾಲೂ ಮೂನ್ನೂರು, ನಾಲ್ಕು ನೂರು ದುಡಿಯುವ ಬೀದಿಬದಿ ವ್ಯಾಪಾರಸ್ಥರಿಗೆ 500 ರೂ. ದಂಡ ಹಾಕಿದರೆ ಹೇಗೆ ಬದುಕಬೇಕು. ಒಂದುವರೆಗೆ ತಿಂಗಳಿಂದ ತಾಲ್ಲೂಕಾಡಳಿತವಾಗಲಿ, ನಗರಸಭೆಯಾಗಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಶಾಸಕರಿಗೆ ನೀಡಿದ ಗಡವು ಸಹ ಮುಕ್ತಾಯವಾಗಿದೆ. ಕೂಡಲೇ ಎಲ್ಲ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ಸಭೆ ಕರೆದು ಬೀದಿಬದಿ ವ್ಯಾಪಾರಸ್ಥರಿಗೆ ಕಿರುಕುಳ ನೀಡದಂತೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಎಲ್ಲ ವ್ಯಾಪಾರಸ್ಥರು ಸೇರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪುನಃ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಸ್ಥರಾದ ಖಾಸಿಂ ಸಾಬ್, ಚಾಂದ್ ಪಾಷಾ, ಲಾಲ್ ಜಿಲೇಬಿ, ಶ್ಯಾಮೀದ್, ಹುಸೇನ ಬಾಷಾ ಸೇರಿದಂತೆ ಇತರರು ಇದ್ದರು.







