ರಾಯಚೂರಲ್ಲಿ ಎಸ್‌ಐಆರ್ ಚುರುಕು: 1.61 ಲಕ್ಷ ಎಣಿಕೆ ನಮೂನೆ ವಿತರಣೆ

ರಾಯಚೂರು, ಜು.1: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಚುರುಕುಗೊಂಡಿದ್ದು, ಮತದಾರರಿಗೆ ಎಣಿಕೆ (Enumeration) ನಮೂನೆಗಳನ್ನು ವಿತರಿಸಲು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 17,14,559 ಮತದಾರರು ಹಾಗೂ 1,853 ಮತಗಟ್ಟೆಗಳು ಇವೆ. ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆಗಳನ್ನು ವಿತರಿಸುವ ಹಾಗೂ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದ್ದು, ಇದೇ ಅವಧಿಯಲ್ಲಿ ದಾಖಲೆಗಳ ಡಿಜಿಟೈಸೇಶನ್ ಪ್ರಕ್ರಿಯೆಯೂ ಕೈಗೊಳ್ಳಲಾಗುತ್ತಿದೆ.
ಈವರೆಗೆ 1,61,672 ಎಣಿಕೆ ನಮೂನೆಗಳು (ಶೇ.9.43) ಮತದಾರರಿಗೆ ವಿತರಿಸಲಾಗಿದ್ದು, 27,900 ನಮೂನೆಗಳನ್ನು (ಶೇ.1.63) ಡಿಜಿಟೈಸೇಶನ್ ಮಾಡಲಾಗಿದೆ. ಅಲ್ಲದೆ, 262 ಮತದಾರರು ತಮ್ಮ ನಮೂನೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ.
ಪರಿಷ್ಕರಣೆ ವೇಳೆ 109 ಮೃತ ಮತದಾರರು, 100 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ಹಾಗೂ 26 ಈಗಾಗಲೇ ನೋಂದಾಯಿತ ಮತದಾರರ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 241 ವಿಶೇಷ ಪ್ರಕರಣಗಳನ್ನು (ಎಸ್‌ಡಿಡಿಒ) ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮತದಾರರ ಪಟ್ಟಿಯನ್ನು ನಿಖರ ಮತ್ತು ಪಾರದರ್ಶಕವಾಗಿ ಸಿದ್ಧಪಡಿಸುವ ಉದ್ದೇಶದಿಂದ ಎಲ್ಲಾ ಮತದಾರರು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ, ಎಣಿಕೆ ನಮೂನೆಗಳನ್ನು ಸಕಾಲದಲ್ಲಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.






