ಸಿರವಾರ | ಬಿಲ್ ಕಲೆಕ್ಟರ್ ವರ್ಗಾವಣೆಗೆ 'ರೈತ ಸಂಘ' ಒತ್ತಾಯ

ಸಿರವಾರ : ಪಟ್ಟಣದ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾ, ಬೇಜವಾಬ್ದಾರಿಯಾಗಿ, ಬಿಲ್ ಕಲೆಕ್ಟರ್ ಆಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ವೀರೇಶ ಎನ್ನುವವರನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರೈತ ಸಂಘ (ಕೆಆರ್ ಎಸ್) ತಾಲೂಕು ಸಮಿತಿಯಿಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಬಿಲ್ ಕಲೆಕ್ಟರ್ ವೀರೇಶ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಖಾತಾ ನಕಲು-ಮ್ಯುಟೇಷನ್ ಗೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡಿದ ಕಾಗದಪತ್ರಗಳನ್ನು ಬೇಕು ಅಂತಲೇ ಕಳೆದುಕೊಂಡು ಜನರನ್ನು ಕಚೇರಿಗೆ ಅಲೆದಾಡಿಸುತ್ತಾರೆ, ಮನಬಂದಂತೆ ಜನರಿಂದ ಹಣ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ನೌಕರರು 20ಕ್ಕೂ ಹೆಚ್ಚು ವರ್ಷ ಒಂದೆಡೆ ಕೆಲಸ ನಿರ್ವಹಿಸದಂತೆ ಸರ್ಕಾರದ ನಿಯಮವಿದ್ದರೂ ಆ ನಿಯಮ ವೀರೇಶ ಅವರಿಗೆ ಯಾಕೆ ಅನ್ವಯ ಆಗುವುದಿಲ್ಲ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಕೆಆರ್ ಎಸ್ ನ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಬೊಮ್ಮನಾಳ, ತಾಲೂಕು ಸಮಿತಿ ಅಧ್ಯಕ್ಷ ಶಿವಪ್ಪ ನಲ್ಕಂದಿನ್ನಿ, ಉಪಾಧ್ಯಕ್ಷ ವೀರೇಶ ನಾಯಕ, ಕಾರ್ಯದರ್ಶಿ ಹುಲಿಗೆಪ್ಪ ಮಡಿವಾಳ, ಎಚ್ ಕೆ ಬಸವರಾಜ, ಸಿದ್ದಯ್ಯ ಸ್ವಾಮಿ, ಕುಂಬಾರ ಹನುಮಂತ, ಸೂರಿ ಹುಲಿಗೆಪ್ಪ, ರಾಘವೇಂದ್ರ, ವೆಂಕಟೇಶ ಲಕ್ಕಂದಿನ್ನಿ, ಮೌಲಪ್ಪ, ಮಾರೆಪ್ಪ, ಬಸವರಾಜ, ಅಮರೇಶ ಸೇರಿದಂತೆ ಇತರರು ಇದ್ದರು.







