ಸಿರವಾರ | ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಅಮಾನತು ಅದೇಶ ಹಿಂಪಡೆಯುವಂತೆ ಕರವೇ ಮನವಿ

ಸಿರವಾರ : ರಾಜ್ಯ ಸರಕಾರದ ನಿರ್ಲಕ್ಷ್ಯ ಹಿನ್ನೆಲೆ ಕಾಲ್ತುಳಿತಕ್ಕೆ 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಪ್ರಮಾಣಿಕ ಅಧಿಕಾರಿಗಳನ್ನು ಅಮಾನತು ಮಾಡಿದೆ. ಬೆಂಗಳೂರು ಕಮಿಷನರ್ ದಯಾನಂದ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ವತಿಯಿಂದ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ ಅವರು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ನೆಯಾರೂ ಶಿಕ್ಷೆ ಅನುಭವಿಸಬೇಕಾಗಿದೆ. ರಾಜ್ಯ ಸರಕಾರ ಮಾಡಿರುವ ಅಮಾನತು ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಪೂರಕ ತಯಾರಿ ಇಲ್ಲದೇ ಆರ್‌ಸಿಬಿ ಟ್ರೋಫಿ ಗೆದ್ದವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು ಅನಾಹುತಕ್ಕೆ ಕಾರಣವಾಗಿದೆ ಎಂದು ದೂರಿದರು.
ಒಂದು ವೇಳೆ ಅಮಾನತು ಹಿಂಪಡೆಯದಿದ್ದರೆ ಜಿಲ್ಲಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಟೇಶ ಶಂಕ್ರಿ, ಅಂಜಿನಯ್ಯ, ನಾಗೇಶ, ದೇವಪ್ಪ, ಗುರುದೇವ ನಾಯಕ ಜಕ್ಕಲದಿನ್ನಿ, ನಾಗರಾಜ ಪಿಡಬ್ಲೂಡಿ, ನಿಂಗನಗೌಡ, ಮುದುಕಪ್ಪ ನಾಯಕ, ಕೆ.ಬಸವರಾಜ ಭಜಂತ್ರಿ, ಅನಿಲ್ ಕುಮಾರ್ ಹಾಗೂ ಹನುಮೇಶ ಸೇರಿದಂತೆ ಇತರರಿದ್ದರು.





