ಸಿರವಾರ | ಭತ್ತದ ಬೆಳೆ ಕಳ್ಳತನದ ಆರೋಪ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಸಿರವಾರ ತಾಲೂಕಿನ ಜಾಗಟಕಲ್ ಸೀಮಾಂತರದಲ್ಲಿ ರಾಜಗೋಪಾಲ ಎಂಬುವವರಿಗೆ ಸೇರಿದ ಜಮೀನಲ್ಲಿ ಬೆಳೆದಿದ್ದ ಭತ್ತವನ್ನು ಅತಿಕ್ರಮಣ ಮಾಡಿ ಭತ್ತ ಕೊಯ್ದುಕೊಂಡು ಕಳ್ಳತನ ಮಾಡಿರುವರ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಿ ವಿಜಯರಾಣಿ ಸಿರವಾರ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸರ್ವೆ 84/2, 84/3 ಹಾಗೂ 84/2 ರಲ್ಲಿರುವ ಏಳು ಎಕರೆ ಭೂಮಿಯನ್ನು ಬಸ್ಸಮ್ಮ ಇವರಿಂದ ರಾಜಗೋಪಾಲರಾವ್ ಮತ್ತು ಶೇಷಾದ್ರಿ ಇವರು ಕಾನೂನು ಬದ್ದವಾಗಿ ಖರೀದಿ ಮಾಡಿದ್ದಾರೆ. ರಾಚಪ್ಪ ಎಂಬುವವರು ಮ್ಯುಟೇಷನ್ ಮಾಡಲು ಆರಕೇರಾ ನಾಡಕಚೇರಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ನೊಂದಣಿ ಬಾಕಿಯಿದೆ. ಆದರೆ ನ.30 ರಂದು ರಾತ್ರಿ ರಾಚಪ್ಪ, ಕಾಸಲಯ್ಯ, ಶಿವಪ್ಪ, ಸಣ್ಣ ಶಿವಪ್ಪ, ಮೂಕಪ್ಪ ಮತ್ತು ಮಲ್ಲಪ್ಪ ಸೇರಿ ಭತ್ತ ಕೊಯ್ಯುವ ಯಂತ್ರದೊಂದಿಗೆ ಬಂದು ಬೆಳೆದು ನಿಂತಿದ್ದ ಭತ್ತವನ್ನುಕೊಯ್ದುಕೊಂಡು ಕಳ್ಳತನ ಮಾಡಿದ್ದಾರೆ. ಜಮೀನು ಲೀಜುದಾರರಾದ ಶ್ರೀನಿವಾಸ, ಮೌನೇಶ ಇವರನ್ನು ಬೆದರಿಸಿದ್ದಾರೆ. ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭತ್ತ ಕಳ್ಳತನ ಮಾಡಿರುವರನ್ನು ಬಂಧಿಸಿಲ್ಲ.ಕೂಡಲೇ ಆರೋಪಿಗಳನ್ನು ಬಂಧಿಸಿ ಕಳವು ಮಾಡಿರುವ ಭತ್ತವನ್ನು ಮರಳಿಸಬೇಕೆಂದು ಒತ್ತಾಯಿಸಿದರು.
ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, ರಾಜಗೋಪಾಲ ಎಂಬುವವರ ಖರೀದಿ ಭೂಮಿಯಲ್ಲಿ ಅತಿಕ್ರಮಣ ಮಾಡಿ ರಾಚಪ್ಪ ಹಾಗೂ ಇತರರು ದೌರ್ಜನ್ಯ ಎಸಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಸ್ಮಮ್ಮ, ಲಕ್ಷ್ಮೀ, ರಾಜಗೋಪಾಲ, ಸಾಜೀದ್, ಮಾರತಿ ಚಿಕ್ಕಸೂಗೂರು, ಕೃಷ್ಣ ಮಚರ್ಲಾ ಜೀವನ ಸಹಿತ ಹಲವರಿದ್ದರು.





