Raichur | ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೆರೆ

ಸುರೇಶ ಶೆಟ್ಟಿ
ಸಿರವಾರ: ಲಂಚ ಸ್ವೀಕರಿಸಿದ ಬಳಿಕ ಲೋಕಾಯುಕ್ತ ಪೊಲೀಸರ ಕಣ್ಣಿಗೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸ ಬಡಾವಣೆಯ ನಿವೇಶನಕ್ಕೆ ಇ-ಖಾತೆ (ಫಾರಂ ನಂ.3) ನೀಡಲು ಸುರೇಶ ಶೆಟ್ಟಿ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ಸಿರವಾರದ ಜಿ. ರಘುರಾಮರೆಡ್ಡಿ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಗುರುವಾರ ಸಂಜೆ ದೂರುದಾರರಿಂದ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಹಿಡಿಯಲು ಮುಂದಾದಾಗ, ಆತ ಕಾರಿನಲ್ಲಿ ಪರಾರಿಯಾಗಿದ್ದನು. ಬೈಕ್ನಲ್ಲಿ ಹಿಂಬಾಲಿಸಿದರೂ ಆತ ತಪ್ಪಿಸಿಕೊಂಡಿದ್ದನು.
ಇದಾದ ಬಳಿಕ ಕಲ್ಮಠ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿ, ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಕವಿತಾಳದ ಸ್ನೇಹಿತನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಲಂಚದ ಹಣ ಸಮೇತ ಶುಕ್ರವಾರ ನಸುಕಿನ ಜಾವದಲ್ಲಿ ಬಂಧಿಸಿದರು.
ಬಂಧಿತನನ್ನು ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿ, ನಂತರ ಆರೋಗ್ಯ ತಪಾಸಣೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಲೋಕಾಯುಕ್ತ ಡಿವೈಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಬ್ಬಂದಿ ಸಹಕರಿಸಿದ್ದರು.






