ಸಿರವಾರ | ಎಸ್ಟಿಗೆ ಕುರುಬ ಸಮಾಜ ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ

ಸಿರವಾರ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಗೆ ಸೇರಿಸುವ ಪ್ರಸ್ತಾವವನ್ನು ವಿರೋಧಿಸಿ, ಗುರುವಾರ ವಾಲ್ಮೀಕಿ ಸಮಾಜದವರು ಸಿರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕಲ್ಲೂರು ಬಸವರಾಜ ನಾಯಕರ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಆರಂಭವಾಗಿ, ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನ್ ರಾಮ್ ವೃತ್ತ, ರಾಜ ಮದಕರಿ ನಾಯಕ ವೃತ್ತದ ಮೂಲಕ ತಹಶೀಲ್ದಾರರ ಕಚೇರಿ ರಸ್ತೆಯಲ್ಲಿ ಮಾನವ ಸರಪಳಿ ರಚಿಸಲಾಯಿತು.
ಪ್ರತಿಭಟನಾಕಾರರು “ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಯೋಜನೆ ನಿಲ್ಲಿಸಬೇಕು. ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಎಸ್‌ಟಿ ಸೌಲಭ್ಯ ಪಡೆಯುತ್ತಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಟ ಸುದೀಪ್ ಅವರ ಭಾವಚಿತ್ರದ ಜೊತೆಗೆ ಕೇಸರಿ, ಕೆಂಪು, ಹಳದಿ, ಬಿಳಿ ಬಾವುಟಗಳು ರಾರಾಜಿಸಿದವು. ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದ ಸಾವಿರಾರು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕೃಷ್ಣ ನಾಯಕ, ಗಡ್ಲ ಅಮರೇಶ ನಾಯಕ, ಲಿಂಗಣ್ಣ ನಾಯಕ (ಸೈದಾಪೂರು), ಮಲ್ಲಿಕಾರ್ಜುನ ಶೀಕಂಟಿ, ಸೂರಿ ಹುಸೇನಪ್ಪ ನಾಯಕ, ಸೋಮ ನಾಯಕ (ಬಾಗಲವಾಡ), ಅಪ್ಪಾಜಿ ನಾಯಕ, ವೆಂಕೋಬ ನಾಯಕ (ಬಾಗಲವಾಡ) ಸೇರಿದಂತೆ ಹಲವಾರು ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಕಲ್ಲೂರು ಬಸವರಾಜ ನಾಯಕ, ಪ.ಪಂ ಉಪಾಧ್ಯಕ್ಷೆ ಲಕ್ಷ್ಮೀ ಅದೇಪ್ಪ ನಾಯಕ, ವೆಂಕಟೇಶ್ ದೊರೆ, ಸೂರಿ ದುರುಗಣ್ಣ ನಾಯಕ, ಗಡ್ಲ ಚನ್ನಬಸವ ನಾಯಕ, ಹುಲಿ ನಾಯಕ (ಗಣದಿನ್ನಿ), ಮಹಾದೇವ ನಾಯಕ (ಗಣದಿನ್ನಿ), ರಮೇಶ್ ದೊರೆ (ಚಿಂಚರಕಿ), ಅಯ್ಯಪ್ಪ ದೊರೆ (ಹೀರಾ), ಮಲ್ಲಿಕಾರ್ಜುನ ವಾಲ್ಮೀಕಿ (ಮಲ್ಲಟ), ಭರತ್ ನಾಯಕ (ಸಿರವಾರ), ರವಿ ನಾಯಕ (ಸಿರವಾರ) ಸೇರಿದಂತೆ ನೂರಾರು ವಾಲ್ಮೀಕಿ ಸಮಾಜದವರು ಭಾಗವಹಿಸಿದ್ದರು.







