ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ರಾಯಚೂರು ಜಿಲ್ಲೆಯಲ್ಲಿ ಶೇ.94ರಷ್ಟು ಸಮೀಕ್ಷೆ ಪೂರ್ಣ

ಸಾಂದರ್ಭಿಕ ಚಿತ್ರ
ರಾಯಚೂರು: ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಾದ್ಯಂತ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಜಿಲ್ಲೆಯಲ್ಲಿ ಈವರೆಗೆ ಶೇ.94.77 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.
ಜೆಸ್ಕಾಂ ಇಲಾಖೆಯ ವಿದ್ಯುತ್ ಸಂಪರ್ಕದ ಆದಾರದಲ್ಲಿ ಜಿಲ್ಲೆಯ ಒಟ್ಟು 3,80,366 ಕುಟುಂಬಗಳ ಸಮೀಕ್ಷೆ ನಡೆಸಲು 3349 ಬ್ಲಾಕ್ಗಳನ್ನು ರಚಿಸಲಾಗಿತ್ತು. ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 3702 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಸೆ.22ರಿಂದ ಆರಂಭವಾದ ಸಮೀಕ್ಷೆಯು ಆರಂಭವಾಗಿದ್ದು, 15 ದಿನಗಳ ಕಾಲ ಅಂದರೆ ಅ.7ರವರೆಗೆ ನಡೆಸಲಾಗುತ್ತಿದ್ದು, ನಾಳೆ ಸಮೀಕ್ಷೆ ಪೂರ್ಣಗೊಳ್ಳಲಿದೆ.
ಅರಕೇರಾ ತಾಲೂಕಿನ 55 ಬ್ಲಾಕ್ಗಳಲ್ಲಿ 20,016 ಮನೆಗಳ ಸಮೀಕ್ಷೆ ಮುಗಿದಿದ್ದು, ದೇವದುರ್ಗದಲ್ಲಿ 25,094, ಲಿಂಗಸುಗೂರಿನಲ್ಲಿ 55,814, ಮಾನ್ವಿಯಲ್ಲಿ 32,657, ಮಸ್ಕಿಯಲ್ಲಿ 40,283, ರಾಯಚೂರಿನಲ್ಲಿ 95,156, ಸಿಂಧನೂರಿನಲ್ಲಿ 7,0206 ಹಾಗೂ ಸಿರವಾರ ತಾಲೂಕಿನಲ್ಲಿ 23,582 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ಜಿಲ್ಲೆಯಾದ್ಯಂತ ಪ್ರತಿದಿನ 31,286 ಕುಟುಂಬಗಳ ಸಮೀಕ್ಷೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ನಾಳೆ ಸಮೀಕ್ಷಾ ಕಾರ್ಯ ಮುಕ್ತಾಯಗೊಳ್ಳಲಿದೆ. ರಾಜ್ಯದಲ್ಲಿ ಹಾವೇರಿ ಶೇ.97.26 ಮೊದಲ ಸ್ಥಾನ, ಕೊಪ್ಪಳ ಶೇ.96.55 ಎರಡನೇ ಸ್ಥಾನ ಹಾಗೂ ರಾಯಚೂರು ಶೇ.94.77ರಷ್ಟು ಪೂರ್ಣಗೊಳಿಸಿ ಈವರೆಗೆ ಮೂರನೇ ಸ್ಥಾನದಲ್ಲಿದೆ.
ಸಮೀಕ್ಷೆ ದಾರರಿಗೆ ಸರ್ವರ್ ಸಮಸ್ಯೆ, ಕೆಲವರಿಗೆ ಅನಾರೋಗ್ಯ, ಗೂಗಲ್ ಮ್ಯಾಪ್ ಗೊಂದಲ ಸೇರಿ ಸಾಕಷ್ಟು ತಾಂತ್ರಿಕ ಸಮಸ್ಯೆ ನಡುವೆಯೂ ಸಮೀಕ್ಷೆ ಪೂರ್ಣಗೊಳ್ಳುತ್ತಿದೆ. ರಾಜ್ಯಾದ್ಯಂತ ಈವರೆಗೆ ಶೇ.77.11 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಸಂಪೂರ್ಣ ಸಮೀಕ್ಷೆ ಆಗುವುದೇ ಅಥವಾ ರಾಜ್ಯ ಸರ್ಕಾರ ಸಮೀಕ್ಷೆಯ ಕಾಲಾವಧಿಯನ್ನು ಮುಂದೂಡುವುದೇ ಎಂಬುವುದನ್ನು ಕಾದು ನೋಡಬೇಕಿದೆ.







