ಹೈನುಗಾರಿಕೆ, ತೋಟಗಾರಿಕೆ, ಸಾವಯವ ಕೃಷಿ ಅಭಿವೃದ್ಧಿಗೆ ವಿಶೇಷ ಒತ್ತು: ಸಂಸದ ಜಿ ಕುಮಾರ ನಾಯಕ

ನವದೆಹಲಿ: ಕಲ್ಯಾಣ ಕರ್ನಾಟಕ ಪ್ರದೇಶದ ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯಲ್ಲಿ ಹೈನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿ, ರೈತರ ಆದಾಯ ವೃದ್ಧಿ ಹಾಗೂ ಕೃಷಿ ಆಧಾರಿತ ಉದ್ಯೋಗಾವಕಾಶಗಳ ಸೃಷ್ಟಿ ಕುರಿತು ಸಂಸದ ಜಿ. ಕುಮಾರ ನಾಯಕ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ಅಧ್ಯಕ್ಷ ಡಾ. ಮೀನೇಶ್ ಶಾ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಹೈನುಗಾರಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಹಾಲು ಉತ್ಪಾದಕರಿಗೆ ಆಧುನಿಕ ತಂತ್ರಜ್ಞಾನ ಹಾಗೂ ತರಬೇತಿ ಸೌಲಭ್ಯಗಳನ್ನು ಒದಗಿಸುವುದು, ಹಾಲು ಸಂಗ್ರಹಣೆ ಮತ್ತು ಸಂಸ್ಕರಣಾ ಮೂಲಸೌಕರ್ಯಗಳನ್ನು ವಿಸ್ತರಿಸುವ ಕುರಿತು ಸಮಾಲೋಚನೆ ನಡೆಯಿತು. ಜೊತೆಗೆ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗುವ ಮೌಲ್ಯವರ್ಧಿತ ಹೈನುಗಾರಿಕೆ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡುವ ಅಗತ್ಯವನ್ನು ಒತ್ತಿಹೇಳಲಾಯಿತು.
ಈ ವೇಳೆ ಮಾತನಾಡಿದ ಡಾ. ಮೀನೇಶ್ ಶಾ ಅವರು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತೋಟಗಾರಿಕೆ ಹಾಗೂ ಸಾವಯವ ಕೃಷಿಗೆ ಅಪಾರ ಅವಕಾಶಗಳಿದ್ದು, ವಿಶೇಷ ಯೋಜನೆಗಳ ಮೂಲಕ ರೈತರಿಗೆ ಹೆಚ್ಚಿನ ಆದಾಯ ದೊರಕುವಂತೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ರೈತ ಉತ್ಪಾದಕ ಸಂಸ್ಥೆಗಳ (FPO) ಬಲವರ್ಧನೆ, ಶೀತ ಸರಪಳಿ (ಕೋಲ್ಡ್ ಚೈನ್) ವ್ಯವಸ್ಥೆಗಳ ಅಭಿವೃದ್ಧಿ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಅಗತ್ಯವಿದೆ ಎಂದು ಸಂಸದ ಕುಮಾರ ನಾಯಕ ತಿಳಿಸಿದರು.
ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ದೊಡ್ಡ ಮಾರುಕಟ್ಟೆಗಳಿಗೆ ತಲುಪಿಸಿ ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆ ಪಡೆಯಲು ನೆರವಾಗುವ ಸಮಗ್ರ ಮಾರುಕಟ್ಟೆ ವೇದಿಕೆ ನಿರ್ಮಾಣದ ವಿಷಯವೂ ಪ್ರಮುಖವಾಗಿ ಚರ್ಚೆಗೆ ಒಳಪಟ್ಟಿತು. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಇದಲ್ಲದೆ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಯುವಕರನ್ನು ಹೈನುಗಾರಿಕೆ ಮತ್ತು ಕೃಷಿ ಆಧಾರಿತ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು, ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಬಲಪಡಿಸುವುದು ಹಾಗೂ ಹೊಸ ಉದ್ಯಮಶೀಲತಾ ಅವಕಾಶಗಳನ್ನು ಸೃಷ್ಟಿಸುವ ಕುರಿತು ಸಹ ಚರ್ಚೆ ನಡೆಯಿತು.
ಈ ಭೇಟಿ ಕಲ್ಯಾಣ ಕರ್ನಾಟಕ ಭಾಗದ ರೈತರು, ಹೈನುಗಾರರು ಹಾಗೂ ಕೃಷಿ ಆಧಾರಿತ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಂಸದ ಕುಮಾರ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.






