ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿ : 25ಕ್ಕೂ ಹೆಚ್ಚು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು

ರಾಯಚೂರು: ನಗರದ ವಾರ್ಡ್ ನಂ.14 ಖೂನಿ ಮಸೀದಿ, ತಿಮ್ಮಾಪೂರಪೇಟೆ, ಬೇರೂನ್ ಕಿಲ್ಲಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುರುವಾರ ಒಂದೇ ದಿನ 25ಕ್ಕೂ ಹೆಚ್ಚು ಮಂದಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
ಬೀದಿ ನಾಯಿಗಳು ಬೆಳಿಗ್ಗೆ ವಾಯು ವಿಹಾರಕ್ಕೆ ಹೊರಡುವವರು, ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವವರ ಮೇಲೆ ಹಠಾತ್ ದಾಳಿ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಒಬ್ಬಂಟಿಯಾಗಿ ಓಡಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಸಂಜೆ ಒಮ್ಮೆಲೆ 15ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ವೈದ್ಯರಿಗೆ ತುರ್ತು ಪರಿಸ್ಥಿತಿ ಎದುರಾಯಿತು. ದಾಳಿಗೆ ಒಳಗಾದವರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದಾರೆ. ಮನೆ ಮುಂದೆ ಆಟವಾಡುತ್ತಿದ್ದಾಗ ಅಥವಾ ಹೊರಗೆ ತಿರುಗಾಡುತ್ತಿದ್ದಾಗ ನಾಯಿಗಳ ದಾಳಿಗೆ ಒಳಗಾದ ಘಟನೆಗಳು ದಾಖಲಾಗಿವೆ.
ಈ ಹಿಂದೆಯೂ ಬೀದಿ ನಾಯಿಗಳ ಹಾವಳಿಯಿಂದ ಒಂದೇ ದಿನ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಸಮಯದಲ್ಲಿ ಹೊರ ರಾಜ್ಯದ ವಿಶೇಷ ತಂಡವನ್ನು ಕರೆಸಿ ನಾಯಿಗಳನ್ನು ಸೆರೆ ಹಿಡಿಯಲಾಗಿತ್ತು. ಕೆಲಕಾಲ ಶಾಂತಿ ನೆಲೆಸಿದ್ದರೂ, ಇದೀಗ ಮತ್ತೆ ನಾಯಿಗಳ ಕಾಟ ಹೆಚ್ಚಾಗಿ ಮಹಾನಗರ ಪಾಲಿಕೆಗೆ ತಲೆನೋವಾಗಿದೆ.
ರಿಮ್ಸ್ ಆಸ್ಪತ್ರೆಗೆ ಎಸ್‌ಡಿಪಿಐ ಜಿಲ್ಲಾ ಘಟಕದ ಕಾರ್ಯಕರ್ತರು ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು. ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ವೇಳೆ ಮುಹಮ್ಮದ್ ಶಫಿ, ಮುಷ್ತಾಕ್ ಅಹಮದ್ ಮತ್ತಿತರರು ಇದ್ದರು.







