ರಾಯಚೂರು: ವಸತಿ ನಿಲಯದಲ್ಲಿ ಮೂಲಸೌಕರ್ಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

ರಾಯಚೂರು: ಇತ್ತೀಚೆಗೆ ಆರಂಭವಾದ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಪದವಿಪೂರ್ವ ಬಾಲಕರವಸತಿ ನಿಲಯದಲ್ಲಿ ಸರಿಯಾಗಿ ಊಟ,ಕುಡಿಯುವ ನೀರು ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ನಡೆಸಲಾಯಿತು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಊಟ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸದೇ ವಾರ್ಡನ್ ಬೇಜವ್ದಾರಿ ಹಾರಿಕೆ ಉತ್ತರ ನೀಡುತ್ತಿದ್ದು ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಸತಿ ನಿಲಯದಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದು, ಹೊರಗಡೆಯೇ ಊಟ ಮತ್ತು ನೀರು ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಸತಿ ನಿಲಯಕ್ಕೆ ಅನ್ಯ ವ್ಯಕ್ತಿಗಳು ಪ್ರವೇಶ ಮಾಡುತ್ತಾರೆ ಎಂದು ವಿದ್ಯಾರ್ಥಿಗಳೇ ರಾತ್ರಿ ಸಮಯದಲ್ಲಿ ಗೇಟ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯದ ವಾರ್ಡನ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು, ಊಟ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನಗರಾಧ್ಯಕ್ಷ ಕೆ.ವಸಂತ ಕುಮಾರ, ಕಾರ್ಯದರ್ಶಿ ಕುಮಾರ ಬೈಲ್ ಮರ್ಚೇಡ್, ಅಭಿಲಾಷೆ ವಿಕಾಸ ರಾಥೋಡ್, ಮಂಜುನಾಥ, ದೇವರಾಜ, ಧನರಾಜ್, ಚಂದ್ರಶೇಖರ, ರಂಗನಾಥ, ರಮೇಶ, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.






