ರಾಯಚೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ರಾಯಚೂರು: ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉರಿಯುತ್ತಿರುವ ತಾಪಮಾನಕ್ಕೆ ಜನಜೀವನ ತತ್ತರಿಸಿದೆ. ಎ.24ರಂದು ಗರಿಷ್ಠ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲೂ ಉಷ್ಣಾಂಶ ಏರಿಕೆಯಾಗಿದೆ. ಮಾನ್ವಿಯಲ್ಲಿ 42.5°C, ಸಿರವಾರದಲ್ಲಿ 42.4°C, ಲಿಂಗಸುಗೂರಿನಲ್ಲಿ 41.9°C, ಮಸ್ಕಿಯಲ್ಲಿ 41.7°C ಹಾಗೂ ಸಿಂಧನೂರಿನಲ್ಲಿ 41.8°C ತಾಪಮಾನ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಮುಂದುವರಿದಿದ್ದು, ಮುಂದಿನ ದಿನಗಳಲ್ಲೂ ಇಳಿಕೆಯ ಲಕ್ಷಣ ಕಾಣುತ್ತಿಲ್ಲ.
ಜನಜೀವನ ಅಸ್ತವ್ಯಸ್ತ :
ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ರಸ್ತೆಗಳಲ್ಲಿ ಸಂಚಾರ ಕಡಿಮೆಯಾಗಿದೆ. ತೀವ್ರ ಬಿಸಿಲಿನಿಂದ ಜನರು ಮನೆಗಳಲ್ಲೇ ಉಳಿಯುವಂತಾಗಿದೆ. ಹೊರಾಂಗಣ ಕೆಲಸಗಾರರು ಹಾಗೂ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿದ್ಯುತ್ ಸಮಸ್ಯೆ :
ಬಿಸಿಲಿನ ತೀವ್ರತೆಯಿಂದ ಫ್ಯಾನ್, ಕೂಲರ್, ಏರ್‌ಕಂಡೀಷನರ್ ಬಳಕೆ ಹೆಚ್ಚಾಗಿ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಸಮರ್ಪಕ ಪೂರೈಕೆ ಇಲ್ಲದೆ ಜನರು ನರಳುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಗಂಭೀರವಾಗಿದೆ. ನಗರದಲ್ಲೂ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿದ್ದು, ದೂರುಗಳಿಗೆ ಸ್ಪಂದನೆ ಇಲ್ಲದಿರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯದ ಆತಂಕ :
ತಾಪಮಾನ ಏರಿಕೆಯಿಂದ ಡೀಹೈಡ್ರೇಷನ್ ಮತ್ತು ಸನ್‌ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಲು, ತಂಪು ಪಾನೀಯ ಸೇವಿಸಲು ಹಾಗೂ ಅಗತ್ಯವಿಲ್ಲದ ಹೊರಗಡೆ ಸಂಚಾರ ತಪ್ಪಿಸಲು ಸಲಹೆ ನೀಡಿದ್ದಾರೆ.
ಮೇ ಮೊದಲ ವಾರದವರೆಗೆ ಬಿಸಿಲಿನ ತೀವ್ರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.






