ಬಿಜೆಪಿ ನಾಯಕರನ್ನು ಮೆಚ್ಚಿಸಲು ಖರ್ಗೆ ಕುಟುಂಬದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ: ಎ.ವಸಂತಕುಮಾರ

ರಾಯಚೂರು: ಬಿಜೆಪಿ ನಾಯಕರನ್ನು ಮೆಚ್ಚಿಸಲು ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಛಲವಾದಿ ನಾರಾಯಣಸ್ವಾಮಿ ಮಾಡುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಿಯಾಂಕ್ ಖರ್ಗೆಯವರ ಎಲ್ಲ ವಹಿವಾಟುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿಕೆ ನೀಡಿರುವ ನಾರಾಯಣಸ್ವಾಮಿಯವರು ಏನು ಬಹಿರಂಗ ಅಥವಾ ಬಿಚ್ಚಿಡುತ್ತೇನೆ ಎಂಬುವುದು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯ ಗೊಂದಲದ ನಾಯಕತ್ವ ಧಿಕ್ಕರಿಸಿ ಇಬ್ಬರು ಶಾಸಕರು ಹೊರಗೆ ಬಂದಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ರಾಜಕಾರಣದ ವ್ಯವಸ್ಥೆಯಲ್ಲಿ ಕಿಂಚಿತ್ತು ಜವಾಬ್ದಾರಿ ಇದ್ದರೆ ಇತಿಮಿತಿಯೊಳಗೆ ಮಾತನಾಡಲಿ ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ. ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಅಬ್ದುಲ್ ಕರೀಮ್, ಬಸವರಾಜ ಪಾಟೀಲ್ ದರೂರು, ಡಾ.ರಜಾಕ್ ಉಸ್ತಾದ್, ಮುರಳಿ ಯಾದವ, ಮಹ್ಮದ್ ಉಸ್ಮಾನ್, ಅಸ್ಲಂ ಪಾಷಾ, ರಾಮಕೃಷ್ಣ, ಸತ್ಯನಾಥ, ಬಸವರಾಜರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







