ಹಟ್ಟಿ ಚಿನ್ನದ ಗಣಿಯಲ್ಲಿ 3ನೇ ಹಂತದ ಹೋರಾಟ ಆರಂಭ : ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಹಟ್ಟಿ, ಜೂನ್ 15: ಕಾರ್ಮಿಕರ ಬಹುಕಾಲದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಆಡಳಿತ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘವು ತನ್ನ ಹೋರಾಟವನ್ನು ಮೂರನೇ ಹಂತಕ್ಕೆ ಕೊಂಡೊಯ್ದಿದ್ದು, ಸೋಮವಾರದಿಂದ ಕಂಪನಿಯ ಮುಖ್ಯ ಕಾರ್ಯಾಲಯದ ಮುಂದೆ ಕಪ್ಪು ಬಾವುಟ ಹಿಡಿದು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದೆ.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಶಫಿ, ಅನಾರೋಗ್ಯಪೀಡಿತ ಕಾರ್ಮಿಕರಿಗೆ ಮೆಡಿಕಲ್ ಅನ್‌ಫಿಟ್ ಯೋಜನೆಯನ್ನು ತಕ್ಷಣ ಜಾರಿಗೊಳಿಸುವುದು, ಹೊಸ ವೇತನ ಒಪ್ಪಂದವನ್ನು ಅನುಷ್ಠಾನಗೊಳಿಸುವುದು, ಸ್ಥಳೀಯ ವಿದ್ಯಾವಂತ ಯುವಕರಿಗೆ ಕ್ಯಾಸುವಲ್ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದಲ್ಲದೆ, ಬಾಕಿ ಇರುವ ಎಕ್ಸ್‌ಗ್ರೇಷಿಯಾ, ಪಿಎಲ್‌ಐಬಿ (PLIB), ಬೋನಸ್, ಎಚ್‌ಆರ್‌ಎ (HRA) ಸೇರಿದಂತೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಕೂಡಲೇ ವಿತರಿಸುವಂತೆ ಸಂಘ ಒತ್ತಾಯಿಸಿದೆ. ಉತ್ಪಾದನೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಡಳಿತ ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ ಎಂದು ಮುಖಂಡರು ಆರೋಪಿಸಿದರು.
ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಬದಲು ಹೊರಗುತ್ತಿಗೆ ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತಿದೆ. ಇದರಿಂದ ಸ್ಥಳೀಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪ್ರತಿಭಟನಾಕಾರರು ದೂರಿದರು.
ಕಾರ್ಮಿಕರ ಹಕ್ಕುಗಳು, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳ ಕುರಿತು ಹಲವಾರು ಬಾರಿ ಆಡಳಿತದೊಂದಿಗೆ ಚರ್ಚೆ ನಡೆಸಿದರೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ಅನಿವಾರ್ಯವಾಗಿದೆ ಎಂದು ಸಂಘ ತಿಳಿಸಿದೆ.
ಕೆಲಸದಿಂದ ವಜಾಗೊಂಡಿದ್ದ 9 ಕಾರ್ಮಿಕರ ಪೈಕಿ 4 ಮಂದಿಗೆ ಮರುನೇಮಕಾತಿ (ರೀ-ಇನ್‌ಸ್ಟೇಟ್‌ಮೆಂಟ್) ನೀಡಲಾಗಿದ್ದು, ಉಳಿದ 5 ಕಾರ್ಮಿಕರಿಗೂ ನ್ಯಾಯ ಒದಗಿಸುವಂತೆ ಸಂಘ ಆಗ್ರಹಿಸಿದೆ.
"ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲ. ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ಕೊಂಡೊಯ್ಯಲಾಗುವುದು" ಎಂದು ಎಸ್.ಎಂ. ಶಫಿ ಎಚ್ಚರಿಕೆ ನೀಡಿದರು.
ಧರಣಿ ಸ್ಥಳದಲ್ಲಿ ಕಾರ್ಮಿಕರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿದು ಗಣಿಯಲ್ಲಿ ಕೈಗಾರಿಕಾ ಶಾಂತಿ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಆನ್ವರಿ, ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಾಪೂರು, ಗೌಸ್ ಮಿಯಾ, ಜಮದಗ್ನಿ, ರಮೇಶ ಬಾಬು, ನಾಗರಾಜ್, ಹನೀಫ್, ಸಿದ್ದಪ್ಪ ಮುಂಡರಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು ಸಾಗರ್, ಮುನೀರುದ್ದೀನ್, ಹನುಮಂತಗೌಡ, ಗುಂಡಪ್ಪಗೌಡ, ಮೌನೇಶ, ಕುಪ್ಪಣ್ಣ, ಪೆಂಚಲಮ್ಮ, ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಮೈನುದ್ದೀನ್, ಎಐಟಿಯುಸಿ ಮುಖಂಡ ಸಂಗಯ್ಯಸ್ವಾಮಿ, ಸಿಐಟಿಯು ಮುಖಂಡರಾದ ಫಕೃದ್ದೀನ್, ಪೆಂಚಲಯ್ಯ, ಸೋಮಣ್ಣ ನಾಯಕ್, ರಾಜೇಶ್ವರಿ, ಅಲ್ಲಾಭಕ್ಷ, ಮಹಮ್ಮದ್, ಖಾಜಾ, ರಫಿ, ಬಸವರಾಜ್ ನಗನೂರು, ಯಮುನಪ್ಪ, ನೋವಾ, ಮಿಯ್ಯಾಸಾಬ್, ಶಿವಪ್ಪ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಮೂರು ಹಂತಗಳಲ್ಲಿ ಹೋರಾಟ ತೀವ್ರ
1ನೇ ಹಂತ: ಮೇ 25ರಂದು ಕಾರ್ಮಿಕರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಯೂನಿಫಾರ್ಮ್‌ಗೆ ಅಳವಡಿಸಿಕೊಂಡು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುವ ಮೂಲಕ ಮೊದಲ ಹಂತದ ಹೋರಾಟ ಆರಂಭಿಸಿದ್ದರು.
2ನೇ ಹಂತ: ನಂತರವೂ ಆಡಳಿತದಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜೂನ್ 1ರಿಂದ 14ರವರೆಗೆ ಪ್ರತಿದಿನ ಗಣಿ ಕೆಲಸಕ್ಕೆ ತೆರಳುವ ಮುನ್ನ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
3ನೇ ಹಂತ: ಆದರೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯದ ಕಾರಣ ಇದೀಗ ಮೂರನೇ ಹಂತವಾಗಿ ಕಂಪನಿಯ ಮುಖ್ಯ ಕಾರ್ಯಾಲಯದ ಮುಂದೆ ಕಪ್ಪು ಬಾವುಟ ಹಿಡಿದು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಲಾಗಿದೆ. ಇದಕ್ಕೂ ಆಡಳಿತ ಮಣಿಯದಿದ್ದರೆ ರಾಜ್ಯ ಮಟ್ಟದ ನಾಯಕರೊಂದಿಗೆ ಚರ್ಚಿಸಿ ಚಿನ್ನದ ಉತ್ಪಾದನೆ ಸ್ಥಗಿತಗೊಳಿಸುವ ಹಂತದವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.






