ಪ್ರತಿಯೊಬ್ಬರ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನವಿದೆ: ಸಚಿವ ಅಜಯ್ ಧರ್ಮಸಿಂಗ್
ಜಿಲ್ಲಾಡಳಿತದಿಂದ ಶಿಕ್ಷಕರ ದಿನಾಚರಣೆ

ರಾಯಚೂರು: ಜಗತ್ತಿನಲ್ಲಿ ತಮ್ಮನ್ನು ರಾಷ್ಟ್ರಪತಿಯಾಗಿ ನೆನಪಿಸಿಕೊಳ್ಳುವುದಕ್ಕಿಂತ ಒಬ್ಬ ಶಿಕ್ಷಕರಾಗಿ ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂಬ ಮಹತ್ವದ ಸಂದೇಶವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನೀಡಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮದಿನೋತ್ಸವ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಬಹುದು, ಎಂಜಿನಿಯರ್‌ಗಳು ಹಲವು ಸೇತುವೆ ಹಾಗೂ ಕಟ್ಟಡಗಳನ್ನು ನಿರ್ಮಿಸಬಹುದು, ವಕೀಲರು ಅನೇಕ ಸಮಸ್ಯೆಗಳನ್ನು ಬಗೆಹರಿಸಬಹುದು ಮತ್ತು ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಬಹುದು. ಆದರೆ ಇವರೆಲ್ಲರ ಜೀವನದಲ್ಲೂ ಅವರನ್ನು ಮುನ್ನಡೆಸಿದ ಒಬ್ಬ ಶಿಕ್ಷಕ ಇದ್ದೇ ಇರುತ್ತಾರೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಒಬ್ಬ ಶಿಕ್ಷಕರ ಮಾರ್ಗದರ್ಶನವಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಬಹುದು ಎಂದು ಸಚಿವರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪ್ರತಿ ವರ್ಷ ಲಭ್ಯವಾಗುವ ಅನುದಾನದಲ್ಲಿ ಕನಿಷ್ಠ ಶೇ.25ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಬೇಕು ಎಂಬ ಆದೇಶವನ್ನು ಮಂಡಳಿ ಹೊರಡಿಸಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರದಿಂದ ಸುಮಾರು 18 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣ ಬಳಸಲಾಗುತ್ತಿದೆ ಎಂದರು.
ಅತಿಥಿ ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡಲಾಗಿದ್ದು, ಮೊದಲ ವರ್ಷದಲ್ಲಿ ಸುಮಾರು 18.34 ಕೋಟಿ ರೂ. ವೆಚ್ಚದಲ್ಲಿ 2,684 ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ಪ್ರತಿ ಎರಡು ಗ್ರಾಮ ಪಂಚಾಯಿತಿಗಳಿಗೆ ಒಂದು ಕೆಪಿಎಸ್ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಸುಮಾರು 294 ಶಾಲೆಗಳ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ಹಾಗೂ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಸಚಿವರು ಹೇಳಿದರು.
ಸಮಾಜದ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಸಚಿವರು, ಯುವ ಪೀಳಿಗೆಗೆ ಉತ್ಸಾಹ ಮತ್ತು ಸ್ಫೂರ್ತಿ ನೀಡುವ ಕಾರ್ಯವನ್ನು ಶಿಕ್ಷಕರು ಮುಂದುವರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು, ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ ಕಿಶೋರ್ ಪಾಟೀಲ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಡಯಟ್ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಈರಣ್ಣ ಕೋಸಗಿ, ಸಾಹಿತಿ ಕೋರೆನಲ್. ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.






