ರಾಯಚೂರಿನಲ್ಲಿ ಗುಡುಗು ಸಹಿತ ಮಳೆ: ರೈತರಲ್ಲಿ ಸಂತಸ

ರಾಯಚೂರು: ಜೂನ್ ತಿಂಗಳು ಆರಂಭವಾದರೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ರಾಯಚೂರು ಜನರಿಗೆ ಬುಧವಾರ ಸಂಜೆ ಸುರಿದ ಗುಡುಗು ಸಹಿತ ಮಳೆ ತಂಪು ನೀಡಿತು.
ರಾಯಚೂರು ಗ್ರಾಮೀಣ ಪ್ರದೇಶ ಸೇರಿದಂತೆ ಹಲವೆಡೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಾಧಾರಣ ಮಳೆಯಾಗಿದ್ದು, ಮುಂಗಾರು ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಗಾಗಲೇ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಗಿದೆ.
ಇನ್ನೊಂದೆಡೆ ಮಳೆಯಿಂದ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಸಮಸ್ಯೆ ಉಂಟಾಯಿತು. ಚಂದ್ರಬಂಡಾ ರಸ್ತೆಯ ಆಶ್ರಯ ಕಾಲೋನಿ, ಸಿಯತಲಾಬ್, ನೀರಭಾವಿಕುಂಟಾ, ಕುಲಸುಂಬಿ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಅನುಭವಿಸಿದರು.
ಸಿಯತಲಾಬ್ ಬಡಾವಣೆಯ ರಾಜಕಮಲ್ ಹೋಟೆಲ್ ಮುಂಭಾಗದ 80 ಅಡಿ ರಸ್ತೆಯ ಎರಡೂ ಬದಿಯ ಗ್ಯಾರೇಜ್‌ಗಳಿಗೆ ನೀರು ನುಗ್ಗಿದ ಪರಿಣಾಮ, ಗ್ಯಾರೇಜ್ ಮಾಲಕರು ಹಾಗೂ ಕಾರ್ಮಿಕರು ಕೆಲಸ ಬಿಟ್ಟು ನೀರು ಹೊರಹಾಕಲು ಹರಸಾಹಸ ಪಟ್ಟರು.
ಬಹುದಿನಗಳ ನಿರೀಕ್ಷೆಯ ನಂತರ ಸುರಿದ ಮಳೆ ರೈತರಿಗೆ ಸಂತಸ ತಂದಿದ್ದರೂ, ನಗರ ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆ ಮತ್ತೆ ಬೆಳಕಿಗೆ ಬಂದಿದೆ.






