ಕೇಂದ್ರ ಬಜೆಟ್ ಕಾರ್ಮಿಕರ, ರೈತರ ನಿರೀಕ್ಷೆ ಹುಸಿಗೊಳಿಸಿದೆ: ರಮೇಶ್ ವೀರಾಪುರ

ಲಿಂಗಸುಗುರು: ಕೇಂದ್ರ ಸರಕಾರದ ಇತ್ತೀಚಿನ ಬಜೆಟ್ ದೇಶದ ಸಾಮಾನ್ಯ ಜನರು, ರೈತರು ಮತ್ತು ಕಾರ್ಮಿಕರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಸಿಪಿಎಂ ತಾಲೂಕು ಸಮಿತಿಯ ಕಾರ್ಯದರ್ಶಿ ರಮೇಶ್ ವೀರಾಪೂರ ತಿಳಿಸಿದ್ದಾರೆ.
2025–26ರ ಅವಧಿಯಲ್ಲಿ ಬೆಳೆ ವಿಮೆ, ಕೃಷಿ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ಅಂದಾಜಿಗಿಂತ ಕಡಿಮೆ ವೆಚ್ಚ ಮಾಡಿರುವುದು ಆತಂಕಕಾರಿ ವಿಷಯ.
ಎಸ್‌ಸಿ–ಎಸ್‌ಟಿ ಸಮುದಾಯಗಳ ಕಲ್ಯಾಣ ಹಾಗೂ ಉತ್ತರ ಪೂರ್ವ ಪ್ರದೇಶಗಳ ಅಭಿವೃದ್ಧಿಗೆ ನೀಡಬೇಕಾದ ಆದ್ಯತೆ ಕೂಡ ಕಡಿಮೆಯಾಗಿದೆ. ಇದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಇದೇ ವೇಳೆ ಬಜೆಟ್ ಧನಿಕರು ಮತ್ತು ದೊಡ್ಡ ಕಂಪನಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದ್ದು, ದುಡಿಯುವ ವರ್ಗದ ಜನರಿಗೆ ಭಾರವಾಗುತ್ತಿದೆ. ತೆರಿಗೆ ಆದಾಯ ಸಂಗ್ರಹಣೆಯಲ್ಲಿ ಕುಂಠಿತ ಸ್ಥಿತಿ ಇದ್ದರೂ ಅದರ ಬಗ್ಗೆ ಸ್ಪಷ್ಟ ಉತ್ತರ ನೀಡಲಾಗಿಲ್ಲ. ರಾಜ್ಯಗಳಿಗೆ ನೀಡುವ ಹಣಕಾಸು ವರ್ಗಾವಣೆಗಳಲ್ಲಿ ಕಡಿತ ಮಾಡಿರುವುದು ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಹೊಡೆತ ನೀಡುತ್ತದೆ ಎಂದು ತಿಳಿಸಿದರು.
ರೈತರು, ಕಾರ್ಮಿಕರು, ಮಧ್ಯಮ ವರ್ಗ ಹಾಗೂ ಬಡವರ ಬದುಕನ್ನು ಸುಧಾರಿಸುವತ್ತ ಗಮನ ಹರಿಸಬೇಕಿದ್ದ ಈ ಬಜೆಟ್ ನಿರಾಶದಾಯಕವಾಗಿದೆ ಎಂದು ರಮೇಶ್ ವೀರಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.





