ಚುನಾವಣಾ ಆಯೋಗವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ: ಕೆ.ಪ್ರಕಾಶ

ರಾಯಚೂರು: ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಸಂಪೂರ್ಣವಾಗಿ ತಮ್ಮ ಹಿತಾಸಕ್ತಿಗೆ ಕಾನೂನು ಬದ್ಧವಾಗಿ ಬಳಸಿಕೊಂಡು ಅಧಿಕಾರದ ಹಪಾಹಪಿಯಿಂದ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ನಡೆಸಲಾಗುತ್ತಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್‍ಐಆರ್ ಹೆಸರಿನಲ್ಲಿ ಮತ ಅಧಿಕಾರ ನಿರಾಕರಣೆ ಕುರಿತು ದುಂಡು ಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನವನ್ನು ಸಮಗ್ರವಾಗಿ ತಿದ್ದುಪಡಿ ಮಾಡುವ ಮೂಲಕ ಹಿಂದೂ ರಾಷ್ಟ್ರ ಮಾಡುವ ಅವಕಾಶವನ್ನು ಬಯಸುತ್ತಿದ್ದರು. ಅದರ ಅವಕಾಶ ಸಿಕ್ಕಿಲ್ಲ ಹೀಗಾಗಿ ಚುನಾವಣಾ ಆಯೋಗದ ಮೂಲಕ ಎಸ್‍ಐಆರ್ ನಡೆಸುತ್ತಿದೆ. ಹಿಂದೆ ಚುನಾವಣೆಯ ನಿಯಮಗಳು ಬೇರೆಯಾಗಿದ್ದವು ಈಗ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.
2022ರ ಮುಂಚೆ ಬೇರೆ ಯಾಗಿತ್ತು, ರಾಜ್ಯ ಚುನಾವಣಾ ಆಯೋಗಕ್ಕೆ ಆಗ ಕೇಳಿದ್ದ ದಾಖಲೆಗಳ ಪಟ್ಟಿಗಳನ್ನು ನೀಡಿ ಎಂದು ಕೇಳಲಾಗಿತ್ತು ಇಂದಿಗೂ ನೀಡಿಲ್ಲ, ಆ ಪಟ್ಟಿಯಲ್ಲಿ ಇಲ್ಲದಿರುವ ನಿಯಮಗಳು, ಈಗ ಬಂದಿವೆ ಆದ್ದರಿಂದಲೇ ಪಟ್ಟಿಯನ್ನು ಆಯೋಗ ನೀಡುತ್ತಿಲ್ಲ. ಈ ಕುರಿತು ಜನರನ್ನು ಜಾಗೃತಿಗೊಳಿಸಬೇಕಾಗಿದೆ ಎಂದರು.
ಇದೇ ವೇಳೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಮಾತನಾಡಿ, ಚುನಾವಣೆಗಳನ್ನು ಗೆಲ್ಲಲು ಬೇಕಾದ ದಾರಿಗಳನ್ನು ಬಿಜೆಪಿ ಕೇಂದ್ರ ಸರ್ಕಾರ ಕಂಡುಕೊಳ್ಳುತ್ತಿದೆ. ಬಿಹಾರದಲ್ಲಿ 25 ಸಾವಿರಕ್ಕೂ ಹೆಚ್ಚಿನ ಓಟುಗಳನ್ನು ಡಿಲಿಟ್ ಮಾಡಲಾಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಲಾಯಿತು. ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಯಿತು. ಇಡೀ ಕಾರ್ಯವನ್ನು ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದರು.
ಬಿಜೆಪಿ ಸರ್ಕಾರಕ್ಕೆ ದೇಶದಲ್ಲಿ ಜನರು ಶಾಂತಿಯಿಂದ ನೆಮ್ಮದಿಯಿಂದ ಬದುಕಬಾರದೆಂಬ ಮನಸ್ಸು ಆರ್.ಎಸ್.ಎಸ್ ಮತ್ತು ಬಿಜೆಪಿಗೆ ಇದೆ. ಅವರು ಆರೋಪ ಮಾಡುವುದೆಲ್ಲ ತಮ್ಮ ವಿರೋಧಿ ಪಕ್ಷದ ರಾಜ್ಯ ಸರ್ಕಾರಗಳ ಮೇಲೆ ಮಾಡುತ್ತಿದ್ದಾರೆ. ತಾವು ಜವಾಬ್ದಾರಿಯಿಂದ ನುಣಿಚಿಕೊಂಡು. ತಮ್ಮ ಅಸಮರ್ಥತೆಯನ್ನು ದೇಶದ ಜನರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಎಸ್‍ಐಆರ್ ಮೂಲಕ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯನ್ನು ಉದ್ದೇಶೀಸಿ ಅನೇಕ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಸರತ್, ಸಿಪಿಐಎಂಎಲ್‍ನ ನಾಗರಾಜ ಪೂಜಾರ್, ಸಿಪಿಎಂನ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರೆ, ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಖಾಜಾ ಅಸ್ಲಂ , ಜಾನವೆಸ್ಲಿ, ಜೈಭೀಮ್, ಡಿ.ಎಸ್.ಶರಣಬಸವ, ಎಚ್.ಪದ್ಮಾ , ಮಾರೆಪ್ಪ ಹರವಿ, ವಿಜಯಲಕ್ಷ್ಮಿ, ಅಜೀಜ್ ಜಾಗೀರದಾರ ಸೇರಿದಂತೆ ಅನೇಕರಿದ್ದರು.







