ರಾಯಚೂರು| ಜಿಲ್ಲಾಡಳಿತದಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ

ರಾಯಚೂರು: ಇತಿಹಾಸದ ಪುಟಗಳಲ್ಲಿ ಸಾಹಸ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ವೀರರಾಣಿ ಒಣಕೆ ಓಬವ್ವ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೋಪಾಲ ಗೆಣ್ಣೂರು ಹೇಳಿದರು.
ನವೆಂಬರ್ 11ರ ಬುಧವಾರ ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಬ್ಬ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಡನ್ನು ರಕ್ಷಿಸಿದ ಆ ಶೌರ್ಯವು ಇಂದಿನ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವು ಇಂದು ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಇಂತಹ ವೀರಮಾತೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಹಿಳೆಯರು ಮುನ್ನಡೆಯಬೇಕಿದೆ ಎಂದರು.
ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಧೈರ್ಯದಿಂದ ಮುನ್ನಡೆಯಬೇಕು. ಮತ್ತು ಕಾನೂನುಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಹೆಣ್ಣು ಮಗಳೂ ಸಹ ಧೈರ್ಯವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮುಂಚೂಣಿಗೆ ಬರಬೇಕೆಂದರು.
ಈ ವೇಳೆ ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮಾ ಅವರು ಮಾತನಾಡಿ, ದೇಶ ರಕ್ಷಣೆಗಾಗಿ ಒನಕೆಯನ್ನೇ ಶಸ್ತ್ರವನ್ನಾಗಿಸಿದ ಧೀರ ಮಾತೆ. ವಂಶ ಪರಂಪರೆ ರಾಜಕೀಯದಲ್ಲಿ ರಾಣಿ ಅರ್ಹತೆಯಿಂದ ತರಬೇತಿಯನ್ನು ಪಡೆದು, ವೀರಸೇನೆ ಹಾಗೂ ಎದುರಾಳಿಯ ಸೈನ್ಯವನ್ನು ಮೆಟ್ಟಿಸುವ ಇತಿಹಾಸವನ್ನು ನಾವು ಕಾಣುತ್ತೇವೆ. ಸಾಮಾನ್ಯ ಕುಟುಂಬದಲ್ಲಿ ಬಡತನದಲ್ಲಿರುವ ಮಾತೆ, ದೇಶಕ್ಕೆ ಅವಶ್ಯಕತೆ ಇದ್ದಾಗ ದೇಶದ ರಕ್ಷಣೆ ಮಾಡುತ್ತಾಳೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಒನಕೆ ಒಬವ್ವ ಎಂದು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಶರಣಪ್ಪ ಚಲವಾದಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆಯರು ತಮ್ಮ ಆತ್ಮಬಿಂಬ, ರಕ್ಷಣೆ ಹಾಗೂ ಧೈರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಂಭಿಯತರರಾದ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೋಮಿನಿ, ಲಲಿತಾ ಅಂಜಿನೇಯ, ಜಗನ್ನಾಥ ಸುಂಕರಿ, ಅರ್ಚನಾ ಸುಂಕರಿ, ಸಂತೋಷ ನಂದಿನಿ, ಮಾರೆಪ್ಪ, ಎಂ.ವಸಂತ, ದಯಾನಂದ, ಶಿವರಾಜ್, ವಿಶ್ವನಾಥ ಪಟ್ಟಿ, ದೇವಿಂದ್ರ, ರಾಘವೇಂದ್ರ, ಭೀಮಣ್ಣ, ಗಿರಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.






