ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ರಾಮಣ್ಣ ಹವಳೆ ಆಯ್ಕೆ

ರಾಯಚೂರು: ನಗರದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ರಾಮಣ್ಣ ಹವಳೆ ಅವರನ್ನು ಆಯ್ಕೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ರಾಯಚೂರು ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ಟೋಬರ್ 24, 25ರಂದು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಭೆಯಲ್ಲಿ ಜಿಲ್ಲೆಯ ಸಾಹಿತಿಗಳಾದ ಗಿರಿರಾಜ್ ಹೊಸಮನಿ, ಮಹಾಂತೇಶ್ ನವಲ್ಕಲ್, ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿ ಇವರುಗಳ ಹೆಸರುಗಳು ಚರ್ಚೆಗೆ ಬಂದವು. ಕೊನೆದಾಗಿ ರಾಮಣ್ಣ ಹವಳೆ ಅವರ ಹೆಸರನ್ನು ಮಸ್ಕಿ ತಾಲೂಕು ಅಧ್ಯಕ್ಷರಾದ ವಿದ್ಯಾವತಿ ವನಕಿ ಸೂಚಿಸಿದರೆ, ರಾಯಚೂರು ತಾಲೂಕು ಅಧ್ಯಕ್ಷರಾದ ಡಾ. ಬಿ. ವಿಜಯ ರಾಜೇಂದ್ರ ಹಾಗೂ ದೇವದುರ್ಗ ತಾಲೂಕು ಅಧ್ಯಕ್ಷರಾದ ಎಚ್. ಶಿವರಾಜ್ ಅವರು ಅನುಮೋದಿಸಿದರು. ಇದಕ್ಕೆ ಸಭೆಯಲ್ಲಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದರು. ಜಿಲ್ಲೆಯ ಹಿರಿಯ ಸಾಹಿತಿಗಳಾದ ರಾಮಣ್ಣ ಹವಳೆ ಅವರ ಸರ್ವಾನುಮತದ ಆಯ್ಕೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಘೋಷಿಸಿದರು.
ಈ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಮಂಜುನಾಥ್ ಕಾಮಿನ್, ತಾಯಪ್ಪ ಬಿ. ಹೊಸೂರ, ಗೌರವ ಕೋಶಾಧ್ಯಕ್ಷರಾದ ನಾಗಪ್ಪ ಜಿ. ಹೊರಪ್ಯಾಟಿ, ಜಿಲ್ಲಾ ಸಹ ಕಾರ್ಯದರ್ಶಿ ಎಂಕಣ್ಣ ಯಾದವ್, ಸಂಘಟನಾ ಕಾರ್ಯದರ್ಶಿ ಮೈನುದ್ದಿನ್ ಕಾಟ್ಮಳ್ಳಿ, ಲಿಂಗಸ್ಗೂರು ತಾಲೂಕು ಅಧ್ಯಕ್ಷರಾದ ಡಾ. ಮಹದೇವಪ್ಪ ನಾಗರಾಳ, ಮೌನೇಶ್ ಹಣಗಿ, ಮಾನ್ವಿ ಅಧ್ಯಕ್ಷರ ಪರವಾಗಿ ಕಾರ್ಯದರ್ಶಿ, ಲಕ್ಷ್ಮಣ್ ಜಾನೇಕಲ್, ಜಿಲ್ಲಾ ಕ ಸಾ ಪ ವಿಶೇಷ ಆಮಂತ್ರಿಕರಾದ ವಿ.ಎನ್. ಅಕ್ಕಿ, ಮಹಾಂತೇಶ್ ಮಸ್ಕಿ, ಜಿಲ್ಲಾ ಪ್ರತಿನಿಧಿಗಳಾದ ಪಿ. ಜಗದೀಶ್, ಯಶೋಧ ವೈ.ಕೆ.ಸೇರಿದಂತೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






