ವಿಜಯೇಂದ್ರ ಪಾದಯಾತ್ರೆ ವಿರೋಧ ಪಕ್ಷದ ಘನತೆಗೆ ಕಪ್ಪು ಚುಕ್ಕಿ: ಎನ್. ಎಸ್. ಬೋಸರಾಜು

ಎನ್.ಎಸ್.ಬೋಸರಾಜು
ರಾಯಚೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರವಾದ ಆಡಳಿತ ನೀಡುತ್ತಿರುವುದನ್ನು ಸಹಿಸದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರ್ ಅಶೋಕ ಬಳ್ಳಾರಿ ಚಲೋ ಪಾದಯಾತ್ರೆ ಮಾಡುತ್ತಿರುವುದು ಅವರ ಘನತೆಗೆ ಚ್ಯುತಿ ಬರುವಂತಹದ್ದಾಗಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆ ಬಗ್ಗೆ ಸ್ವಪಕ್ಷದವರಾದ ವಿ. ಸೋಮಣ್ಣ ಮತ್ತು ದೋಸ್ತಿಯ ಭಾಗವಾದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಪ್ರಶ್ನೆ ಕೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲು ಮಾಡುತ್ತಾರೆಂದು ಆರ್.ಅಶೋಕ ಮತ್ತು ವಿಜಯೇಂದ್ರ ಅವರಿಗೆ ಗೊತ್ತಾಗಿದೆ. ಆದ್ದರಿಂದ ತಮ್ಮನ್ನು ತಾವು ತೋರಿಸಿಕೊಳ್ಳಲು ಈ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು, ಜನರು ಸಂಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರ, ಜನಪರವಾದ ಚಿಂತನೆಗಳನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ. ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರವೇ ಬರಪೀಡಿತ ತಾಲೂಕುಗಳನ್ನು ಘೋಷಿಸಿ ಕೇಂದ್ರ ಸರ್ಕಾರದಿಂದ ಪರಿಹಾರ ಅನುದಾನ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಬರಪೀಡಿತ ತಾಲೂಕುಗಳ ಘೋಷಣೆಯನ್ನು ಸರ್ಕಾರ ಸುಮ್ಮನೆ ಮಾಡಲಾಗುವುದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಡ್ರಾಟ್ ಮ್ಯಾನುಯಲ್ ಪ್ರಕಾರ ವಿವಿಧ ಇಲಾಖೆಗಳು, ಅದರಲ್ಲೂ ಕೃಷಿ ಮತ್ತು ಕಂದಾಯ ಇಲಾಖೆ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು ಎಂದರು.
ಈಗಾಗಲೇ 101 ತಾಲೂಕುಗಳನ್ನು ಮೊದಲ ಹಂತದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ತಾಲೂಕುಗಳನ್ನು ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಅನೌಪಚಾರಿಕವಾಗಿ ಮಾಹಿತಿ ನೀಡಲಾಗಿದೆ. ಕೇಂದ್ರದ ತಂಡ ಪರಿಶೀಲನೆ ನಡೆಸಿ, ಮಾರ್ಗಸೂಚಿಗಳ ಪ್ರಕಾರ ಒಪ್ಪಿಗೆ ನೀಡಿದ ಬಳಿಕವೇ ಕೇಂದ್ರದಿಂದ ಅನುದಾನ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದರು.
ಎನ್ಡಿಆರ್ಎಫ್ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಾಗಿದ್ದು, ಎಸ್ಡಿಆರ್ಎಫ್ ರಾಜ್ಯ ವಿಪತ್ತು ಪರಿಹಾರ ನಿಧಿಯಾಗಿದೆ. ಈ ಎರಡೂ ನಿಧಿಗಳ ಅನುದಾನ ಪಡೆಯಲು ನಿಗದಿತ ನಿಯಮ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಈ ವಿಚಾರದಲ್ಲಿ ಜನರಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಹೇಳಿದರು.
ರಾಯಚೂರು ಜಿಲ್ಲೆಯ ಮಾನ್ವಿ, ಸಿರವಾರ ಹಾಗೂ ಸಿಂಧನೂರು ಸೇರಿದಂತೆ ಉಳಿದಿರುವ ತಾಲೂಕುಗಳಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕೆಲವೆಡೆ ಮಳೆ ಮಾಪನ ಕೇಂದ್ರಗಳ ಕೊರತೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಒಟ್ಟಾರೆ ಮಳೆಯ ಪ್ರಮಾಣದ ಅಂದಾಜಿನಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಬರ ಘೋಷಣೆ ಪ್ರಕ್ರಿಯೆಯಲ್ಲಿ ಈ ಎಲ್ಲ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವೈಯಕ್ತಿಕ ಸಮಸ್ಯೆಗಳು, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಮಟ್ಟದ ಸಮಸ್ಯೆಗಳು ಸೇರಿದಂತೆ ವಿವಿಧ ಸಾರ್ವಜನಿಕ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ನಡೆಯಲಿದೆ. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಕಂದಾಯ ಗ್ರಾಮಗಳಾಗಿ ಘೋಷಿಸಿರುವ ಪ್ರದೇಶಗಳು ಹಾಗೂ ತಾಂಡಾಗಳಿಗೆ ಹಕ್ಕುಪತ್ರ ನೀಡುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ನಿವೇಶನ: ಬಡವರು ಹಾಗೂ ನಿವೇಶನ ರಹಿತರಿಗೆ ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ನಿವೇಶನಗಳನ್ನು ಗುರುತಿಸುವ ಅಥವಾ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಸರ್ಕಾರಿ ಜಾಗ ಲಭ್ಯವಿದ್ದರೆ ಅದನ್ನು ಬಳಸಿಕೊಳ್ಳುವುದು, ಇಲ್ಲದಿದ್ದರೆ ಅಗತ್ಯ ಜಾಗ ಖರೀದಿಸುವ ಮೂಲಕ ನಿವೇಶನ ಒದಗಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ನೇತೃತ್ವದಲ್ಲಿ ಮುಂದಿನ ಹಂತದಲ್ಲಿ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯ ಮುಂದುವರಿಯಲಿದೆ. ರಾಜ್ಯಮಟ್ಟದಲ್ಲಿ ಹಿರಿಯ ಅಧಿಕಾರಿ ಹರ್ಷಗುಪ್ತ ಅವರನ್ನು ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ನೇಮಿಸಲಾಗಿದ್ದು, ಅವರು ಪ್ರತಿದಿನದ ಪ್ರಗತಿಯನ್ನು ಪರಿಶೀಲಿಸಿ ಕಾರ್ಯವನ್ನು ಸರಳೀಕರಿಸುವ ಹಾಗೂ ವೇಗಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಮಹ್ಮದ್ ಶಾಲಂ, ರುದ್ರಪ್ಪ ಅಂಗಡಿ, ಯೂಸೂಫ್ ಖಾನ್ ಇದ್ದರು.






