ನ.30 ರವರೆಗೆ ಮಾತ್ರ ತುಂಗಭದ್ರಾ ಎಡದಂಡೆ ನಾಲೆಗೆ ನೀರು: ಐಸಿಸಿ ಸಭೆಯಲ್ಲಿ ನಿರ್ಣಯ

ಸಿಂಧನೂರು ಜೂ.27: ಶುಕ್ರವಾರ ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯಿಂದ ಚರ್ಚಿಸಿ ನಿರ್ಣಯಿಸಿದಂತೆ ತುಂಗಭದ್ರ ಎಡದಂಡೆ ನಾಲೆಗೆ ಜುಲೈ 7 ರಿಂದ ಜುಲೈ 15 ರವರೆಗೆ 2000 ಕ್ಯೂಸೆಕ್ಸ್ ಜುಲೈ 16 ರಿಂದ ಜುಲೈ 31 ರವರೆಗೆ 3000 ಕ್ಯೂಸೆಕ್ಸ್ ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ 4100 ಕ್ಯೂಸೆಕ್ಸ್ ನೀರು ಬಿಡಲು ಸಮಿತಿ ನಿರ್ಣಯಿಸಿದೆ.
ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶಿವರಾಜ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಸಚಿವರು ಶಾಸಕರು, ಮತ್ತು ಸಂಸದರು, ಹಾಗೂ ಸದಸ್ಯರು ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ಸಭೆ ತುಂಗಭದ್ರ ಎಡದಂಡೆ ಕಾಲುವೆಗೆ ನವೆಂಬರ್ 31 ರವರೆಗೆ ನೀರು ಬಿಡಲು ನಿರ್ಣಯಿಸಿದೆ.
ಸಭೆಯಲ್ಲಿ ಕ್ರಸ್ಟ್ ಗೇಟ್ ಗಳನ್ನು ಅಳವಡಿಕೆಯ ಸಂಬಂಧಪಟ್ಟಂತೆ ಚರ್ಚೆಯಾಗಿ, ಈ ವಿಚಾರಕ್ಕೆ ಒಮ್ಮತದ ಅಭಿಪ್ರಾಯ ಬರದ ಕಾರಣ ಜುಲೈ ಎರಡನೇ ಅಥವಾ ಮೂರನೇ ವಾರದೊಳಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಾಸಕರು, ಸಿಡಬ್ಲ್ಯೂಸಿ ತಜ್ಞರು, ನಾಲ್ಕು ಜಿಲ್ಲೆಯ ಉಸ್ತುವಾರಿ ಸಚಿವರುಗಳು ಒಳಗೊಂಡಂತೆ ಎಲ್ಲರು ಸೇರಿ ಕ್ರಸ್ಟ್ ಗೇಟ್ ಗಳನ್ನು ಅಳವಡಿಸುವ ಸಂಬಂಧ ಸಭೆ ಸೇರಿ ನಿರ್ಧರಿಸಲು ಸಭೆಯಲ್ಲಿ ಚರ್ಚೆ ಆಯಿತು ಎಂದು ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ತಿಳಿಸಿದರು.
ಸಭೆಯಲ್ಲಿ ನಮ್ಮ ಭಾಗದ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಸೇರಿದಂತೆ ಉಳಿದ ಭಾಗದ ಶಾಸಕರು, ಸಂಸದರು, ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿದ್ದರು.







