ಯತೀಂದ್ರ ಹೇಳಿಕೆಗೆ ನಾನೇಕೆ ಪ್ರತಿಕ್ರಿಯೆ ನೀಡಲಿ, ಸಿದ್ದರಾಮಯ್ಯ ನಾವು ಒಟ್ಟಿಗೆ ಇದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಯಚೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ನಾನು ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ಇದ್ದು ಆಡಳಿತ ನಡೆಸುತ್ತಿದ್ದೇವೆ. ಹೈಕಮಾಂಡ್ ನಿಲುವಿಗೆ ಬದ್ಧರಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಸಿ.ಎಂ ಆಗುವ ಅರ್ಹತೆ ಸತೀಶ್ ಜಾರಕಿಹೊಳಿಗೆ ಇದೆ ಎನ್ನುವ ಮಾತಿಗೆ ಅವರನ್ನೇ ಕೇಳಿ ಎಂದು ಉತ್ತರಿಸಿದರು.
ಮಂತ್ರಾಲಯದ ರಾಯರ ಮಠದಲ್ಲಿ ವಸತಿ ನಿಲಯಕ್ಕೆ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥರ ಜೊತೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಂದಿನ ಮುಖ್ಯಮಂತ್ರಿ ಕುರಿತ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಅವರನ್ನೇ ಕೇಳಬೇಕು. ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ನಾನು ಸಿದ್ದರಾಮಯ್ಯ ಹಾಗೂ ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ಬದ್ಧನಾಗಿದ್ದೇನೆ. ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ಗಡಿ ಭಾಗದ ಮಂತ್ರಾಲಯದ ಸಮೀಪದಲ್ಲಿರುವ ಚಿಕ್ಕಮಂಚಾಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಾಗಿದ್ದು, 150 ಕೋಟಿ ರೂ. ಮೌಲ್ಯದ ಟೆಂಡರ್ ಕರೆಯಲಾಗಿದೆ. ಈ ಯೋಜನೆ ಮೂಲಕ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಲಭ್ಯವಾಗಲಿದೆ.
ಆಂಧ್ರಪ್ರದೇಶದ ಕೆಲವರು ಈ ಯೋಜನೆ ಕುರಿತು ತಕರಾರು ದಾಖಲಿಸಿದ್ದರಿಂದ, ಆಂಧ್ರಪ್ರದೇಶದ ಸಂಬಂಧಿಸಿದ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಮಂತ್ರಾಲಯ ಮಠದ ಕೆಲವು ಬೇಡಿಕೆಗಳ ಕುರಿತು ಕೂಡ ಚರ್ಚೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.







