ಕೇಂದ್ರ ಸರಕಾರ ಜಮೀನು ಒದಗಿಸಿದರೆ ಸಿಂಧನೂರಿನಲ್ಲಿ ಜವಳಿ ಪಾರ್ಕ್ ಪರಿಶೀಲನೆ: ಸಚಿವ ಶಿವಾನಂದ ಪಾಟೀಲ್

ಶಿವಾನಂದ ಪಾಟೀಲ್
ರಾಯಚೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭೂಮಿಯಲ್ಲಿ 15 ಎಕರೆ ಜಾಗವನ್ನು ಜವಳಿ ಇಲಾಖೆಗೆ ಮಂಜೂರು ಮಾಡಿದರೆ ಸಿಂಧನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಬಸನಗೌಡ ಬಾದರ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜವಳಿ ಪಾರ್ಕ್ ಸ್ಥಾಪನೆಗೆ 15 ಎಕರೆ ಭೂಮಿಯನ್ನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಲು ಕಂದಾಯ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಒಂದೇ ಸ್ಥಳದಲ್ಲಿ 15 ಎಕರೆ ಸರ್ಕಾರಿ ಭೂಮಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಉದ್ಯೋಗ ಅರಸಿ ಸಿಂಧನೂರು ತಾಲೂಕಿನ ಯುವಕ–ಯುವತಿಯರು ರಾಜ್ಯದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಜವಳಿ ಪಾರ್ಕ್ ಸ್ಥಾಪನೆಯಾದರೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಆದರೆ ಸಿಂಧನೂರು ತಾಲೂಕಿನಲ್ಲಿ ಅಗತ್ಯ ಪ್ರಮಾಣದ ಸರ್ಕಾರಿ ಭೂಮಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭೂಮಿಯನ್ನು ಬಳಸುವ ಕುರಿತು ಚಿಂತನೆ ನಡೆದಿದೆ. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಭೂಮಿ ಲಭ್ಯವಾದಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಕುರಿತು ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.







